ಬೀಜಿಂಗ್ (ಚೀನಾ): ಚೀನಾದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಚೀನಾ ಸರ್ಕಾರ COVID-19 ನಿಯಂತ್ರಣಾ ವ್ಯವಸ್ಥೆಯ ಮೇಲಿನ ಹಿಡಿತ ಕಳೆದುಕೊಂಡಿದೆಯೇ ಎಂಬ ಅನುಮಾನ ಈಗ ದಟ್ಟವಾಗಿದೆ. ಈ ಚಳಿಗಾಲದಲ್ಲಿ ಕೋವಿಡ್ನ ಕನಿಷ್ಠ ಮೂರು ಅಲೆಗಳು ಚೀನಾಕ್ಕೆ ಅಪ್ಪಳಿಸಲಿವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ದೇಶಾದ್ಯಂತ ಜನರು ಪ್ರತಿಭಟನೆಗಳನ್ನು ನಡೆಸಿದ ನಂತರ ಹಠಾತ್ತಾಗಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೊನೆಗೊಳಿಸಲು ನಿರ್ಧರಿಸಿದ ಚೀನಾ, ಹೊಸ ಕೋವಿಡ್ ಅಲೆ ಎದುರಿಸುವ ಸಿದ್ಧತೆ ಮಾಡಿಕೊಂಡಿರಲೇ ಇಲ್ಲ ಎಂದು ಹಾಂಗ್ ಕಾಂಗ್ ಮೂಲದ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.
ಸಾವಿನ ಸಂಖ್ಯೆಯ ಬಗ್ಗೆ ಚೀನಾ ಸರ್ಕಾರ ಈವರೆಗೂ ಮೌನವಾಗಿದೆ. ಆದಾಗ್ಯೂ, ಮುಂಬರುವ ತಿಂಗಳುಗಳಲ್ಲಿ ಕೋವಿಡ್ ಸೋಂಕಿನ ಸತತ ಅಲೆಗಳ ಬಗ್ಗೆ ಚೀನಾದ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಈ ಎಚ್ಚರಿಕೆ ನೀಡಲು ಕಾರಣವಾಗಿದೆ.
ಪ್ರಸ್ತುತ ಏಕಾಏಕಿ ಈ ಚಳಿಗಾಲದಲ್ಲಿ ಕೋವಿಡ್ ಉತ್ತುಂಗಕ್ಕೇರಲಿದೆ ಮತ್ತು ಸುಮಾರು ಮೂರು ತಿಂಗಳ ಕಾಲ ಮೂರು ಅಲೆಗಳು ಅಪ್ಪಳಿಸಲಿವೆ ಎಂದು ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ ಹೇಳಿದ್ದಾರೆಂದು ಹಾಂಗ್ ಕಾಂಗ್ ಮಾಧ್ಯಮಗಳು ವರದಿ ಮಾಡಿವೆ. ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೂ ಜುನ್ಯೂ ಈ ಹೇಳಿಕೆ ನೀಡಿದ್ದಾರೆ.
ವೂ ಪ್ರಕಾರ, ಮೊದಲ ಅಲೆಯು ಇಂದಿನಿಂದ ಜನವರಿ ಮಧ್ಯದವರೆಗೆ ಇರುತ್ತದೆ. ಎರಡನೇ ಅಲೆ ಅದರ ನಂತರ ಬರಲಿದೆ. ಜನವರಿ 21 ರಂದು ಪ್ರಾರಂಭವಾಗುವ ಹೊಸ ಚಾಂದ್ರಮಾನ ವರ್ಷದ ಸಂದರ್ಭದಲ್ಲಿ ದೇಶಾದ್ಯಂತ ನೂರಾರು ಮಿಲಿಯನ್ ಜನತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವ ಮಧ್ಯದಲ್ಲೇ ಈ ಎರಡನೇ ಅಲೆ ಬರಲಿದೆ.