ಸಿಯುಡಾಡ್ ಜುವಾರೆಜ್, ಮೆಕ್ಸಿಕೋ:ಅಮೆರಿಕದ ಗಡಿಯಲ್ಲಿರುವ ಮೆಕ್ಸಿಕನ್ ನಗರದಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ 39 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕೊ ಸರ್ಕಾರ ಮಂಗಳವಾರ ತಿಳಿಸಿದೆ. ಸಿಯುಡಾಡ್ ಜುವಾರೆಜ್‌ನಲ್ಲಿರುವ ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) (National Migration Institute -INM) ಸೌಲಭ್ಯದಲ್ಲಿ ಮಧ್ಯರಾತ್ರಿಯ ಸ್ವಲ್ಪ ಸಮಯಕ್ಕೆ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಡಜನ್‌ಗಟ್ಟಲೆ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಬಂದವು.
ಐಎನ್‌ಎಮ್‌ನ ಪಾರ್ಕಿಂಗ್ ಸ್ಥಳದಿಂದ 12 ಮೃತ ದೇಹಗಳನ್ನು ಫೋರೆನ್ಸಿಕ್ ಸಿಬ್ಬಂದಿ ಹೊರತೆಗೆಯುವ ದೃಶ್ಯಗಳು ಕಾಣಿಸಿವೆ. ಬೆಂಕಿ ಅನಾಹುತದಲ್ಲಿ 39 ವಲಸಿಗರು ಸಾವಿಗೀಡಾಗಿರುವ ಘಟನೆಗೆ ಆಂತರಿಕ ಸಚಿವಾಲಯ ಸಂತಾಪ ಸೂಚಿಸುತ್ತದೆ ಎಂದು ಐಎನ್‌ಎಂ ಹೇಳಿಕೆಯಲ್ಲಿ ತಿಳಿಸಿದೆ. ವಲಸೆ ಬಂಧಿತರ ಕೇಂದ್ರದಲ್ಲಿ ಸುಮಾರು 70 ಜನರಿದ್ದು, ಅದರಲ್ಲಿ ಬಹುತೇಕರು ವೆನೆಜುವೆಲಾ ದೇಶದವರು ಎಂದು ಮೂಲಗಳು ಹೇಳಿವೆ. ಸ್ಥಳೀಯ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಹಲವಾರು ಬೀದಿ ಬದಿ ವ್ಯಾಪಾರಿಗಳನ್ನು ವಿಚಾರಣೆ ನಡೆಸಿ ಅದರಲ್ಲಿನ ಅನೇಕ ವಿದೇಶಿಯರನ್ನು ಬಂಧಿಸಿದ್ದರು. ಅವರೆಲ್ಲರನ್ನು ಇಲ್ಲಿ ಇಡಲಾಗಿತ್ತು ಎನ್ನಲಾಗಿದೆ.
ವಿನಾಗ್ಲಿ ಎಂದು ತನ್ನ ಹೆಸರು ಹೇಳಿಕೊಂಡ ವೆನೆಜುವೆಲಾದ ಮಹಿಳೆಯೊಬ್ಬರು ವಲಸೆ ಕೇಂದ್ರದ ಹೊರಗೆ ನಿಂತಿದ್ದು, ವಲಸೆ ಕೇಂದ್ರದಲ್ಲಿ ಬಂಧನಕ್ಕೊಳಗಾದ ತನ್ನ 27 ವರ್ಷದ ಗಂಡನ ಬಗ್ಗೆ ಮಾಹಿತಿ ಕೇಳುತ್ತಿರುವುದು ಕಂಡುಬಂದಿತು. ತನ್ನ ಗಂಡನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು ಎಂದು ನಂತರ ಆಕೆ ಮಾಧ್ಯಮಗಳಿಗೆ ತಿಳಿಸಿದಳು. ತನ್ನ ಪತಿ ಮೆಕ್ಸಿಕೊದಲ್ಲಿ ಉಳಿಯಲು ಅನುಮತಿಸುವ ದಾಖಲೆಗಳನ್ನು ಹೊಂದಿದ್ದಾರೆ ಎಂದು ಆಕೆ ಹೇಳಿದರು.