ಜೆಡ್ಡಾ (ಸೌದಿ ಅರೇಬಿಯಾ): ಸೇನಾ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರ ಸ್ಥಳಾಂತರ ಮಾಡುವ ಕಾರ್ಯ ಮುಂದುವರೆದಿದೆ. 362 ಜನ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಸೌದಿ ಅರೇಬಿಯಾದ ಜೆಡ್ಡಾದಿಂದ ವಿಮಾನ ಹಾರಾಟ ಆರಂಭಿಸಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿ ಪಿಕ್ಕಿ ಬುಡಕಟ್ಟಿನವರು ಇದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಕೇಂದ್ರ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
ಸೇನೆ ಮತ್ತು ಅರೆ ಸೇನೆ ಪಡೆಗಳ ನಡುವಿನ ಬಿಕ್ಕಟ್ಟಿನಿಂದ ಸುಡಾನ್ನಲ್ಲಿ ಹಿಂಸಾಚಾರ ನಡೆಯುತ್ತಿದೆ. ಅಪಾರ ಸಾವು-ನೋವು ಉಂಟಾಗುತ್ತಿದೆ. ಈ ಸಂಘರ್ಷ ಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸೋಮವಾರದಿಂದ 'ಆಪರೇಷನ್ ಕಾವೇರಿ' ಹೆಸರಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ವಿಮಾನವು ಜೆಡ್ಡಾದಿಂದ ಬೆಂಗಳೂರಿಗೆ ಹೊತ್ತು ತರುತ್ತಿದೆ. ಈ ವಿಮಾನದಲ್ಲಿ 362 ಭಾರತೀಯರನ್ನು ನೋಡಿ ಸಂತೋಷವಾಯಿತು. ಇವರಲ್ಲಿ ಉತ್ತಮ ಸಂಖ್ಯೆಯಲ್ಲಿ ಹಕ್ಕಿ ಪಿಕ್ಕಿ ಬುಡಕಟ್ಟಿನವರು ಸೇರಿದ್ದಾರೆ ಎಂದು ಕೇಂದ್ರ ಸಚಿವ ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಆಪರೇಷನ್ ಕಾವೇರಿ ಅಡಿ ಜೆಡ್ಡಾಗೆ ತಲುಪಿದ 8ನೇ ಬ್ಯಾಚ್, ಸುಡಾನ್ನಲ್ಲಿ ಮತ್ತೆ ಕದನ ವಿರಾಮ ಘೋಷಣೆ
ಇದುವರೆಗೆ ಹತ್ತನೇ ಬ್ಯಾಚ್‌ಗಳ ಸ್ಥಳಾಂತರ:ಮತ್ತೊಂದೆಡೆ, ಇದುವರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರ ಎಂಟನೇ, ಒಂಬತ್ತನೇ ಮತ್ತು ಹತ್ತನೇ ಬ್ಯಾಚ್‌ಗಳು ಸುಡಾನ್‌ನಿಂದ ಜೆಡ್ಡಾಕ್ಕೆ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ತಿಳಿಸಿದ್ದಾರೆ. ಆಪರೇಷನ್ ಕಾವೇರಿ ಮತ್ತಷ್ಟು ಮುಂದುವರೆದಿದೆ. ಭಾರತೀಯ ವಾಯು ಪಡೆಯ ಸಿ-130ಜಿ ವಿಮಾನದಲ್ಲಿ 135 ಪ್ರಯಾಣಿಕರೊಂದಿಗೆ 10ನೇ ಬ್ಯಾಚ್ ಸುಡಾನ್‌ನಿಂದ ಜೆಡ್ಡಾಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.