ಕ್ವೆಟ್ಟಾ (ಪಾಕಿಸ್ತಾನ):ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯದ ಝರ್ಘೂನ್ ಪ್ರದೇಶದ ಭದ್ರತಾ ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಒಬ್ಬ ಭಯೊತ್ಪಾದಕ ಗುಂಡಿಗೆ ಬಲಿಯಾದರೆ, ಮೂವರು ಯೋಧರು ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವ್ಯವಹಾರಗಳ ವಿಭಾಗ ತಿಳಿಸಿದೆ. ಈ ಕುರಿತು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನೀಡಿದ ಹೇಳಿಕೆಯಲ್ಲಿ, ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಳನ್ನು ಗುರಿಯಾಗಿಸಿದ್ದಾರೆ. ಅಲ್ಲಿ ನಡೆಯುವ ಸುಲಿಗೆ ಪ್ರಯತ್ನಗಳಿಗೆ ಕಡಿವಾಣ ಹಾಕಲು ಇತ್ತೀಚೆಗೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿತ್ತು. ಇವುಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದೆ.
ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕೂಡಾ ಪ್ರತಿದಾಳಿ ನಡೆಸಿವೆ. ಎನ್ಕೌಂಟರ್ನಲ್ಲಿ ಮೂವರು ಯೋಧರು ಹತರಾಗಿದ್ದಾರೆ. ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಕಳೆದ ವರ್ಷದಲ್ಲಿ ನಡೆದ 436 ಭಯೋತ್ಪಾದಕ ದಾಳಿಗಳಲ್ಲಿ ಕನಿಷ್ಠ 293 ಜನರು ಸಾವನ್ನಪ್ಪಿದ್ದರು. 521 ಮಂದಿ ಗಾಯಗೊಂಡಿದ್ದರು ಎಂದು ISPR ಮಹಾ ನಿರ್ದೇಶಕ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಇತ್ತೀಚೆಗೆ ಹೇಳಿದ್ದರು. ಪ್ರಸಕ್ತ ವರ್ಷದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟಾರೆ 137 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. 117 ಮಂದಿ ಗಾಯಗೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ.
ಇದನ್ನೂ ಓದಿ:ಜಿ-7 ಶೃಂಗಸಭೆ.. ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ