ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಈ ವರ್ಷ 2014ರಿಂದೀಚೆಗೆ ಅತಿ ಹೆಚ್ಚು ಆತ್ಮಾಹುತಿ ದಾಳಿಗಳು ನಡೆದಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪಾಕಿಸ್ತಾನ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (ಪಿಐಎಸ್ಎಸ್) ಬಿಡುಗಡೆ ಮಾಡಿದ ಅಂಕಿ - ಅಂಶಗಳ ಪ್ರಕಾರ 2023 ರಲ್ಲಿ ಆತ್ಮಾಹುತಿ ದಾಳಿಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ. ಇದು 2014 ರ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಡಾನ್ ವರದಿ ಮಾಡಿದೆ.
ಆತ್ಮಾಹುತಿ ದಾಳಿಗಳಲ್ಲಿ ಸಾವಿಗೀಡಾದವರ ಪೈಕಿ ಕನಿಷ್ಠ 48 ಪ್ರತಿಶತದಷ್ಟು ಮತ್ತು ಗಾಯಗೊಂಡವರ ಪೈಕಿ 58 ಪ್ರತಿಶತದಷ್ಟು ಜನ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ. ಈ ವರ್ಷ ಒಟ್ಟು 29 ಆತ್ಮಾಹುತಿ ದಾಳಿಗಳು ನಡೆದಿದ್ದು, ಇದರ ಪರಿಣಾಮವಾಗಿ 329 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 582 ಜನ ಗಾಯಗೊಂಡಿದ್ದಾರೆ.
2013ರಲ್ಲಿ ನಡೆದ 47 ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 683 ಮಂದಿ ಪ್ರಾಣ ಕಳೆದುಕೊಂಡ ಬಳಿಕ ಇದು ಗರಿಷ್ಠ ಸಾವಿನ ಸಂಖ್ಯೆಯಾಗಿದೆ ಎಂದು ಡಾನ್ ವರದಿ ಮಾಡಿದೆ. ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ, ಆತ್ಮಾಹುತಿ ದಾಳಿಗಳ ಸಂಖ್ಯೆಯಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಹಾಗೂ ಸಾವಿನ ಪ್ರಮಾಣ ಆಘಾತಕಾರಿ ಶೇಕಡಾ 226 ರಷ್ಟು ಏರಿಕೆಯಾಗಿದೆ. ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ ಶೇಕಡಾ 101 ರಷ್ಟು ಏರಿಕೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ.