ಕರಾಚಿ (ಪಾಕಿಸ್ತಾನ) :ಪಾಕಿಸ್ತಾನದ ರೂಪಾಯಿ ಡಾಲರ್ ಎದುರು ಪಾತಾಳಕ್ಕಿಳಿದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಾಲ ಯೋಜನೆ ಪುನರುಜ್ಜೀವನ ವಿಳಂಬವಾಗುತ್ತಿರುವ ಮಧ್ಯದಲ್ಲೇ ಮಂಗಳವಾರ ಇಂಟರ್‌ಬ್ಯಾಂಕ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಪಾಕಿಸ್ತಾನ ರೂಪಾಯಿ 288 ರೂ. ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರ ಜೊತೆಗೆ ಪಾಕಿಸ್ತಾನವು ವಿದೇಶಿ ಸಾಲ ಮರುಪಾವತಿ ಮಾಡಲಾಗದ ಹಂತ್ಕೆಕ ತಲುಪಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಂಗಳವಾರ ಬೆಳಗ್ಗೆ ಸುಮಾರು 10.23 ಗಂಟೆಗೆ ಪಾಕ್ ಕರೆನ್ಸಿಯು ಡಾಲರ್ ಎದುರು ಶೇಕಡಾ 1 (ಅಥವಾ ರೂ 2.86) ಕುಸಿದು 287.90 ಕ್ಕೆ ತಲುಪಿದೆ. ಇದಕ್ಕೂ ಒಂದು ದಿನ ಮುನ್ನ ಪಾಕ್ ರೂಪಾಯಿ ಮೌಲ್ಯವು ಯುಎಸ್ ಡಾಲರ್ ಎದುರು 285.04 ರೂ. ಮಟ್ಟದಲ್ಲಿ ಕೊನೆಗೊಂಡಿತ್ತು.
ಆತಂಕದ ಹಿನ್ನೆಲೆಯಲ್ಲಿ ಆಮದುದಾರರು US ಡಾಲರ್‌ಗಳ ಖರೀದಿಯನ್ನು ಪುನರಾರಂಭಿಸಿದ್ದಾರೆ ಎಂದು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಸೂಚಿಸಿವೆ. ಆದರೆ ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆಯು ಕಡಿಮೆಯಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಏಪ್ರಿಲ್ 10-16 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು 6.5 ಶತಕೋಟಿ ಡಾಲರ್ ಮೌಲ್ಯದ IMF ಸಾಲ ಕಾರ್ಯಕ್ರಮವನ್ನು ಪುನರಾರಂಭಿಸಲು ಪ್ರಯತ್ನ ಮಾಡಲಿದ್ದಾರೆ.
ಅಮೆರಿಕ ಭೇಟಿಯ ಸಮಯದಲ್ಲಿ ದಾರ್ ಅವರು ವಾಷಿಂಗ್ಟನ್ ಡಿಸಿಯಲ್ಲಿನ ಇತರ ಉನ್ನತ ಅಧಿಕಾರಿಗಳೊಂದಿಗೆ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ. ನವೆಂಬರ್ 2022 ರಿಂದ ಸ್ಥಗಿತಗೊಂಡ ಹಣಕಾಸು ನೆರವಿನ ಯೋಜನೆಯನ್ನು ಪುನರಾರಂಭಿಸುವ ಸಲುವಾಗಿ ಪಾಕಿಸ್ತಾನವು ಜನವರಿ ಅಂತ್ಯದಿಂದ ಐಎಂಎಫ್ನೊಂದಿಗೆ ಮಾತುಕತೆ ನಡೆಸುತ್ತಿದೆ. ಐಎಂಎಫ್ ನೆರವಿನ ವಿಳಂಬದಿಂದ ಡಾಲರ್ ಒಳಹರಿವು ನಿಂತು ಹೋಗುವಂತಾಗಿದೆ. ಅದರಂತೆ, ದೇಶದ ವಿದೇಶಿ ವಿನಿಮಯ ಸಂಗ್ರಹವು ಪ್ರಸ್ತುತ 4.2 ಶತಕೋಟಿ ಡಾಲರ್ನಷ್ಟು ಕಡಿಮೆ ಮಟ್ಟಕ್ಕೆ ಕುಸಿದಿದೆ.