ಕೀವ್, ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, 27 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಶುಕ್ರವಾರ, ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ 122 ಕ್ಷಿಪಣಿ ಮತ್ತು 36 ಡ್ರೋನ್‌ಗಳೊಂದಿಗೆ ದಾಳಿ ಮಾಡಿದೆ. 27 ಮಂದಿ ಸಾವನ್ನಪ್ಪಿದ್ದು, 144 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 22 ತಿಂಗಳ ಸುದೀರ್ಘ ಯುದ್ಧದಲ್ಲಿ ಇದು ಅತಿದೊಡ್ಡ ವೈಮಾನಿಕ ದಾಳಿ ಎಂದು ಉಕ್ರೇನ್ ಹೇಳಿದೆ.
ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಪ್ರತಿಯೊಂದು ಶಸ್ತ್ರಾಸ್ತ್ರವನ್ನು ನಮ್ಮ ವಿರುದ್ಧ ಹಾರಿಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಆರೋಪಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಷ್ಯಾ 96 ಕ್ಷಿಪಣಿ ಮತ್ತು ಈ ವರ್ಷದ ಮಾರ್ಚ್‌ನಲ್ಲಿ 81 ಕ್ಷಿಪಣಿಗಳ ಮೂಲಕ ದಾಳಿಗೈದಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಅವಶೇಷಗಳಿಂದ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಮತ್ತು ಸಂತ್ರಸ್ತ ಕುಟುಂಬಗಳು ಪ್ರಯತ್ನಿಸುತ್ತಿವೆ.
ದಾಳಿಯ ಮೂಲಕ ರಷ್ಯಾ ನೀಡುತ್ತಿರುವ ಸಂದೇಶವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಉಕ್ರೇನ್‌ಗೆ ಬೆಂಬಲ ನೀಡುವ ಕುರಿತು ಚರ್ಚಿಸುತ್ತಿರುವ ಸಂಸತ್ಗಳು ಮತ್ತು ಮಾತುಕತೆಗೆ ರಷ್ಯಾ ಸಕಾರಾತ್ಮಕವಾಗಿದೆ ಎಂದು ವರದಿ ಮಾಡುವ ಮಾಧ್ಯಮಗಳು ಈ ದಾಳಿಗಳ ಬಗ್ಗೆ ಗಮನ ಹರಿಸಬೇಕು ಎಂದು ಉಕ್ರೇನ್ ಹೇಳಿದೆ. ಅಲ್ಲದೆ, ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಸಲು ಮಿತ್ರರಾಷ್ಟ್ರಗಳಿಗೆ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರು ಮನವಿ ಮಾಡಿದ್ದಾರೆ.