ಜೆರುಸಲೇಂ: ಹಮಾಸ್ ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಿರುವ ಯುದ್ಧದಿಂದ ಇಸ್ರೇಲ್ ದೇಶಕ್ಕೆ ಸುಮಾರು 197 ಬಿಲಿಯನ್ ಶೆಕೆಲ್ (53 ಬಿಲಿಯನ್ ಡಾಲರ್) ನಷ್ಟವಾಗಲಿದೆ ಎಂದು ಆ ದೇಶದ ಕೇಂದ್ರ ಬ್ಯಾಂಕ್ ಮುನ್ಸೂಚನೆ ನೀಡಿದೆ. ಬ್ಯಾಂಕ್ ಆಫ್ ಇಸ್ರೇಲ್ ಪ್ರಕಾರ, ಈ ಮೊತ್ತವು ಸರಿಸುಮಾರು 107 ಬಿಲಿಯನ್ ಶೆಕೆಲ್ ರಕ್ಷಣಾ ವೆಚ್ಚ, 22 ಬಿಲಿಯನ್ ಶೆಕೆಲ್ ಹಾನಿ ಪರಿಹಾರ ಮತ್ತು 25 ಬಿಲಿಯನ್ ಶೆಕೆಲ್ ಇತರ ನಾಗರಿಕ ವೆಚ್ಚಗಳನ್ನು ಒಳಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುದ್ಧದ ಫಲಿತಾಂಶ ಏನಾಗಲಿದೆ ಮತ್ತು ಯುದ್ಧ ಇನ್ನೂ ಎಷ್ಟು ದಿನಗಳವರೆಗೆ ನಡೆಯಲಿದೆ ಎಂಬುದು ತಿಳಿದಿಲ್ಲ. ಆದರೆ ಗಾಝಾ ಮೇಲಿನ ಯುದ್ಧಕ್ಕೆ ಇಸ್ರೇಲ್ ದಿನಕ್ಕೆ 260 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬೀಳುವುದು ಖಚಿತವಾಗಿದೆ.
ಇದಲ್ಲದೆ, ಸರ್ಕಾರಿ ಸಾಲದ ಮೇಲಿನ ಬಡ್ಡಿ 8 ಬಿಲಿಯನ್ ಶೆಕೆಲ್ಗಳಿಗೆ ತಲುಪುವ ನಿರೀಕ್ಷೆಯಿದೆ. ಹಾಗೆಯೇ ಸಂಘರ್ಷದಿಂದಾಗಿ ತೆರಿಗೆ ಆದಾಯದ ನಷ್ಟ 35 ಬಿಲಿಯನ್ ಶೆಕೆಲ್ ಎಂದು ಅಂದಾಜಿಸಲಾಗಿದೆ. ಇಸ್ರೇಲಿ ಆರ್ಥಿಕತೆಯ ಮೇಲೆ ಯುದ್ಧದ ನೇರ ಪರಿಣಾಮದ ತೀವ್ರತೆಯು 2024 ರವರೆಗೆ ಕಡಿಮೆಯಾಗುವುದರೊಂದಿಗೆ ಮುಂದುವರಿಯುತ್ತದೆ ಎಂಬ ಆಧಾರದ ಮೇಲೆ ಈ ಮುನ್ಸೂಚನೆಯನ್ನು ರೂಪಿಸಲಾಗಿದೆ.
ಮುನ್ಸೂಚನೆಯ ಪ್ರಕಾರ, ಇಸ್ರೇಲ್ನ ಜಿಡಿಪಿ 2023 ಮತ್ತು 2024 ರಲ್ಲಿ ಶೇಕಡಾ 2 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಕಳೆದ ತಿಂಗಳು ಇದ್ದ ಮುನ್ಸೂಚನೆಯ 2023 ಕ್ಕೆ ಶೇಕಡಾ 2.3 ಮತ್ತು 2024 ಕ್ಕೆ ಶೇಕಡಾ 2.8 ರಷ್ಟು ಬೆಳವಣಿಗೆಯ ಮೌಲ್ಯಮಾಪನಕ್ಕಿಂತ ಕಡಿಮೆಯಾಗಿದೆ. ನಿರೀಕ್ಷಿತ ಹೆಚ್ಚಿನ ವೆಚ್ಚಗಳು ಮತ್ತು ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತದಿಂದಾಗಿ, ಸರ್ಕಾರದ ಸಾಲ 2022 ರಲ್ಲಿ ಜಿಡಿಪಿಯ ಶೇಕಡಾ 60.5 ರಿಂದ 2023 ರಲ್ಲಿ ಶೇಕಡಾ 63 ಕ್ಕೆ ಮತ್ತು 2024 ರ ಅಂತ್ಯದ ವೇಳೆಗೆ ಶೇಕಡಾ 66 ಕ್ಕೆ ಏರುತ್ತದೆ ಎಂದು ಬ್ಯಾಂಕ್ ಅಂದಾಜಿಸಿದೆ.
ಮತ್ತೊಂದು ಒಪ್ಪಂದ ಪ್ರಸ್ತಾಪಿಸಿದ ಹಮಾಸ್: ಗಾಜಾ ಪಟ್ಟಿಯಿಂದ ಈಗಾಗಲೇ ಬಿಡುಗಡೆ ಮಾಡಲಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳು ಮಾತ್ರವಲ್ಲದೆ ಇನ್ನಿತರ ಒತ್ತೆಯಾಳುಗಳನ್ನು ಕೂಡ ಬಿಡುಗಡೆ ಮಾಡುವ ಹೊಸ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮುಂದೆ ಇಟ್ಟಿರುವುದಾಗಿ ಹಮಾಸ್ ಹೇಳಿದೆ. "ಮುಂದಿನ ಎರಡು ದಿನಗಳ ಕಾಲ ಇಸ್ರೇಲ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಮುಂದಿನ ದಿನಗಳಲ್ಲಿ ನಾವು ಮಹಿಳೆಯರು ಮತ್ತು ಮಕ್ಕಳು ಮಾತ್ರವಲ್ಲದೆ ಇತರರನ್ನು ಬಿಡುಗಡೆ ಮಾಡುವ ಹೊಸ ಒಪ್ಪಂದವನ್ನು ಬಯಸುತ್ತಿದ್ದೇವೆ" ಎಂದು ಹಮಾಸ್ ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.
ಮೂಲ ನಾಲ್ಕು ದಿನಗಳ ಕದನ ವಿರಾಮದ ಅಡಿಯಲ್ಲಿ ನಾಲ್ಕನೇ ವಿನಿಮಯದಲ್ಲಿ, 11 ಇಸ್ರೇಲಿ ಒತ್ತೆಯಾಳುಗಳನ್ನು ಸೋಮವಾರ ರಾತ್ರಿ ಗಾಜಾ ಪಟ್ಟಿಯಲ್ಲಿ ಹಮಾಸ್ ಸೆರೆಯಿಂದ ಬಿಡುಗಡೆ ಮಾಡಲಾಯಿತು. ಮಂಗಳವಾರ ಮುಂಜಾನೆ ಇಸ್ರೇಲಿ ಜೈಲುಗಳಲ್ಲಿದ್ದ 33 ಪ್ಯಾಲೆಸ್ಟೈನಿಯರನ್ನು ಬಿಡುಗಡೆ ಮಾಡಿ ಆಕ್ರಮಿತ ವೆಸ್ಟ್ ಬ್ಯಾಂಕ್ ನಗರ ರಮಲ್ಲಾಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಮೆಟಾ ವಕ್ತಾರ ಆಂಡಿ ಸ್ಟೋನ್ರನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಗೆ ಸೇರಿಸಿದ ರಷ್ಯಾ