ತಮೌಲಿಪಾಸ್ (ಮೆಕ್ಸಿಕೋ): ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕ ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ರಾಜ್ಯದ ಉತ್ತರ ಗಡಿಯಲ್ಲಿರುವ ತಮೌಲಿಪಾಸ್ ಪೊಲೀಸರು ಖಚಿತಪಡಿಸಿದ್ದಾರೆ.
ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವ್ಯಾನೊಂದು ಮಕ್ಕಳು ಸೇರಿದಂತೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಮಿತಿ ಮೀರಿ ಸರಕು ಸಾಗಾಟ ಮತ್ತು ಡಿಕ್ಕಿಯ ರಭಸಕ್ಕೆ ವ್ಯಾನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಧಿಕಾರಿಗಳು ಅಲ್ಲಿಗೆ ತಲುಪುವಷ್ಟರಲ್ಲಿ ಅಪಘಾತದ ಸ್ಥಳದಲ್ಲಿ ಟ್ರಕ್ ಇರಲಿಲ್ಲ ಎಂದು ತಮೌಲಿಪಾಸ್‌ನ ಸಾರ್ವಜನಿಕ ಭದ್ರತಾ ಸಚಿವಾಲಯ ಮಾಹಿತಿ ನೀಡಿದೆ. ಅಪಘಾತದಿಂದಾಗಿ ರಾಜ್ಯ ರಾಜಧಾನಿ ಸಿಯುಡಾಡ್ ವಿಕ್ಟೋರಿಯಾದ ಹೊರಗೆ ಸುಮಾರು ಅರ್ಧ ಘಂಟೆಯವರೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.