ಜೆಡ್ಡಾ(ಸೌದಿ ಅರೇಬಿಯಾ):ಸೇನಾ ಸಂಘರ್ಷಕ್ಕೀಡಾಗಿರುವ ಸುಡಾನ್‌ನಿಂದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿದ್ದ 2 ವಿಮಾನ ಮತ್ತು ಒಂದು ನೌಕೆಯ ಜೊತೆಗೆ ಈಗ ಇಂಡಿಗೋ ವಿಮಾನ ಕೂಡ ಜೊತೆಯಾಗಿದೆ. ಇಂದು ಬೆಳಗ್ಗೆ ಜೆಡ್ಡಾದಿಂದ ಹಾರಿದ್ದ ವಿಮಾನ 231 ಭಾರತೀಯರ ಸಮೇತ ದೆಹಲಿಗೆ ಬಂದಿಳಿದಿದೆ. ಈ ಮೂಲಕ ಒಟ್ಟಾರೆ 2400 ಜನರನ್ನು ರಕ್ಷಣೆ ಮಾಡಿದಂತಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
'ಆಪರೇಷನ್ ಕಾವೇರಿ' ಅಡಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ, ಐಎನ್ಎಸ್ ಸುಮೇಧಾ ನೌಕೆ 300 ಮಂದಿ ಭಾರತೀಯರನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಕರೆತರುತ್ತಿದೆ. ನೌಕೆ ರಕ್ಷಣೆ ಮಾಡುತ್ತಿರುವ 13 ನೇ ಬ್ಯಾಚ್ ಇದಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಸುಡಾನ್‌ನಿಂದ ರಕ್ಷಿಸಲ್ಪಟ್ಟ 231 ಭಾರತೀಯರನ್ನು ಇಂಡಿಗೋ ವಿಮಾನ ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಿಂದ ತವರಿಗೆ ಹೊತ್ತು ತಂದಿತು. ಇಂದು ಬೆಳಗ್ಗೆ ವಿಮಾನ ಅಲ್ಲಿಂದ ಪ್ರಯಾಣ ಆರಂಭಿಸಿತ್ತು. 11 ಗಂಟೆ ಸುಮಾರಿನಲ್ಲಿ ವಿಮಾನ ದೆಹಲಿ ನಿಲ್ದಾಣಕ್ಕೆ ಬಂದಿಳಿದಿದೆ. ಭಾರತೀಯರನ್ನು ಹೊತ್ತು ತಂದ 5ನೇ ವಿಮಾನ ಇದಾಗಿದೆ. ಈಗಾಗಲೇ 1600 ಜನರು ತವರಿಗೆ ಆಗಮಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಕಲಹ ಪೀಡಿತ ಆಫ್ರಿಕನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಭಾಗಿಯಾಗಲು ವಿಮಾನಯಾನ ಸಂಸ್ಥೆಗಳೇ ಸ್ವಚ್ಛೆಯಿಂದ ಮುಂದೆ ಬಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸುಡಾನ್‌ನಿಂದ ಭಾರತೀಯ ನಾಗರಿಕರ ಕರೆತರುವ ಕೇಂದ್ರದ ಕಾರ್ಯಾಚರಣೆಯನ್ನು ಬೆಂಬಲಿಸಲು ಇಂಡಿಗೋ ಬದ್ಧವಾಗಿದೆ ಎಂದು ಹೇಳಿದರು.
119 ಕನ್ನಡಿಗರ ರಕ್ಷಣೆ:ಸುಡಾನ್‌ನಿಂದ ತವರಿಗೆ ಬಂದ ಭಾರತೀಯರ ಪೈಕಿ 119 ಮಂದಿ ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ನಿನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ 362 ಮಂದಿ ಬಂದಿಳಿದರು. ಅದರಲ್ಲಿ 114 ಮಂದಿ ಕನ್ನಡಿಗರು ಇದ್ದರು. ಇದಲ್ಲದೇ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಜನರು ಕೂಡ ಇದ್ದರು. ಇದಕ್ಕೂ ಮೊದಲು ಮುಂಬೈಗೆ 5 ಮಂದಿ ಕನ್ನಡಿಗರು ಬಂದಿಳಿದಿದ್ದರು.
ಹೆಚ್ಚುವರಿ ಕದನ ವಿರಾಮ:ಸೌದಿ ಅರೇಬಿಯಾ ಮತ್ತು ಅಮೆರಿಕದ ಮಧ್ಯಸ್ಥಿಕೆ ಪ್ರಯತ್ನಗಳ ನಂತರ 72 ಗಂಟೆಗಳ ಹೆಚ್ಚುವರಿ ಕಾಲ ಕದನ ವಿರಾಮವನ್ನು ವಿಸ್ತರಿಸುವುದಾಗಿ ಸುಡಾನ್ ಹೇಳಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಘರ್ಷಣೆಯ ಪರಿಣಾಮವಾಗಿ ಸುಡಾನ್ ಹೊತ್ತಿ ಉರಿಯುತ್ತಿದೆ. ಕದನ ವಿರಾಮದ ನಡುವೆಯೂ ಹಿಂಸಾಚಾರ ಮತ್ತು ಘರ್ಷಣೆಗಳು ನಡೆಯುತ್ತಿರುವುದು ವರದಿಯಾಗುತ್ತಿವೆ. ಸುಡಾನ್ನ ಸೇನಾ ನಾಯಕ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್ ಮತ್ತು ಅರೆಸೇನಾ ಪಡೆಯ ಕಮಾಂಡರ್ ಮೊಹಮದ್ ಹಮ್ದಾನ್ ಡಾಗ್ಲೋ ಅವರ ಮಧ್ಯೆ ಅಧಿಕಾರಕ್ಕಾಗಿ ಘರ್ಷಣೆಗಳು ಭುಗಿಲೆದ್ದಿವೆ.
ಓದಿ:ಆಪರೇಷನ್ ಕಾವೇರಿ ಅಡಿ ಜೆಡ್ಡಾಗೆ ತಲುಪಿದ 8ನೇ ಬ್ಯಾಚ್, ಸುಡಾನ್ನಲ್ಲಿ ಮತ್ತೆ ಕದನ ವಿರಾಮ ಘೋಷಣೆ