ನ್ಯೂಯಾರ್ಕ್ (ಅಮೆರಿಕ) : 2001ರ ಸೆಪ್ಟೆಂಬರ್ 9 ರಂದು ಅಮೆರಿಕದ ಮೇಲೆ ಭೀಕರ ಭಯೋತ್ಪಾದಕ ದಾಳಿಗಳು ನಡೆದು 22 ವರ್ಷಗಳೇ ಕಳೆದು ಹೋಗಿದ್ದರೂ, ಅವುಗಳಿಂದ ಆದ ಗಾಯ ಮಾತ್ರ ಇನ್ನೂ ಮಾಸಿಲ್ಲ. 2001 ರಲ್ಲಿ ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿಸಿ ನಗರಗಳ ಮೇಲೆ ವಿಮಾನಗಳನ್ನು ಅಪಹರಿಸಿ ಸರಣಿ ಆತ್ಮಹತ್ಯಾ ದಾಳಿಗಳನ್ನು ನಡೆಸಲಾಗಿತ್ತು. ಮುಸ್ಲಿಂ ಮೂಲಭೂತವಾದಿಗಳ ಈ ದಾಳಿಗಳಲ್ಲಿ 3,000 ಜನ ಪ್ರಾಣ ಕಳೆದುಕೊಂಡಿದ್ದರು.
ಮುಸ್ಲಿಂ ಬ್ರದರ್ಹುಡ್ ಎಂಬ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದ ಖಾಲಿದ್ ಶೇಖ್ ಮೊಹಮ್ಮದ್ 9/11 ದಾಳಿಯ ಪ್ರಮುಖ ರೂವಾರಿಯಾಗಿದ್ದ ಎಂದು ನಂಬಲಾಗಿದೆ. 1990 ರ ದಶಕದಲ್ಲಿ ಒಂದು ಡಜನ್ಗೂ ಹೆಚ್ಚು ಅಮೆರಿಕನ್ ವಿಮಾನಗಳನ್ನು ಸ್ಫೋಟಿಸುವುದು ಖಾಲಿದ್ನ ಯೋಜನೆಯಾಗಿತ್ತು. ಆದರೆ ಅದು ವಿಫಲವಾಗಿತ್ತು ಮತ್ತು ಆತ ತದನಂತರ 9/11 ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ ಒಸಾಮಾ ಬಿನ್ ಲಾಡೆನ್ ಜೊತೆಗೆ ಕೈಜೋಡಿಸಿದ್ದ.
2 ದಶಕದ ಬಳಿಕ ಮತ್ತಿಬ್ಬರ ಗುರುತು ಪತ್ತೆ: ಈ ಭೀಕರ ಭಯೋತ್ಪಾದಕ ದಾಳಿ ನಡೆದು ಎರಡು ದಶಕಗಳ ನಂತರ, ವಿಶ್ವ ವ್ಯಾಪಾರ ಕೇಂದ್ರದ ಮೇಲಿನ 9/11 ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳನ್ನು ಇದೀಗ ಗುರುತಿಸಲಾಗಿದೆ. ದಾಳಿಗಳಲ್ಲಿ ಮೃತಪಟ್ಟವರನ್ನು ಗುರುತಿಸಿ ಅವರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೀಗ ದಾಳಿ ನಡೆದು 22ನೇ ವರ್ಷ ತುಂಬುವ ಮೊದಲು ಓರ್ವ ಪುರುಷ ಮತ್ತು ಓರ್ವ ಮಹಿಳೆಯ ಅವಶೇಷಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ಕುಟುಂಬಗಳ ಕೋರಿಕೆಯ ಮೇರೆಗೆ ಅಧಿಕಾರಿಗಳು ಅವರ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ.