ಟೆಹ್ರಾನ್(ಇರಾನ್): ಇರಾನ್‌ನ ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಜಾರಿಗೊಳಿಸುವ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ ನಂತರ ಯುವತಿಯೊಬ್ಬರು ಕೋಮಾಕ್ಕೆ ಜಾರಿ ಬಳಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಇರಾನಿಯನ್ನರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಿದ್ದಾರೆ.
ನೈತಿಕ ಪೊಲೀಸ್ ಘಟಕ ಬಂಧನದ ನಂತರ ಆಸ್ಪತ್ರೆಯಲ್ಲಿ ಯುವತಿ ಮಹ್ಸಾ ಅಮಿನಿ ಮೃತಪಟ್ಟಿದ್ದಾರೆ ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ. ಈ ಘಟನೆ ನಗರದಲ್ಲಿ ಬೆಂಕಿಯಂತೆ ಹಬ್ಬಿತು. ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಆದೇಶದ ಬಳಿಕ ಮಹ್ಸಾ ಅಮಿನಿ ಸಾವು ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ವರಿದಯಾಗಿದೆ.
'22 ವರ್ಷದ ಮಹ್ಸಾ ಅಮಿನಿ ನನ್ನ ಸಹೋದರಿ. ನಾವೆಲ್ಲರೂ ನಮ್ಮ ಕುಟುಂಬದೊಂದಿಗೆ ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ವಾಸಿಸುತ್ತಿದ್ದೇವೆ. ಹಿಜಾಬ್ ವಿರುದ್ಧ ಹೋರಾಟಕ್ಕೆ ಅಮಿನಿ ಬೆಂಬಲ ಸೂಚಿಸಿದ್ದರು. ಶುಕ್ರವಾರ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮಿನಿಯನ್ನು ನೈತಿಕ ಪೊಲೀಸ್ ಘಟಕದ ಅಧಿಕಾರಿಗಳು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ನಾನು ಸಹ ಕೂಡಲೇ ಪೊಲೀಸ್ ಠಾಣೆಗೆ ಹೋಗಿದ್ದೆ. ಆಕೆ ಬಂಧನವಾದ ಎರಡು ಗಂಟೆಗಳ ಬಳಿಕ ಪೊಲೀಸ್ ಠಾಣೆಯಿಂದ ಆ್ಯಂಬುಲೆನ್ಸ್ ಸಿಬ್ಬಂದಿ ಬಂದು ನನ್ನ ಸಹೋದರಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಇದರ ಬಗ್ಗೆ ನಾನು ವಿಚಾರಿಸಿದಾಗ ಆಕೆಗೆ ಹೃದಾಯಘಾತವಾಗಿದೆ' ಎಂದು ಹೇಳಿದರು ಅಂತಾ ಯುವತಿಯ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲ ತಿಂಗಳಿನಿಂದ ಇರಾನಿನ ಹಕ್ಕುಗಳ ಕಾರ್ಯಕರ್ತ ಮಹಿಳೆಯರು ತಮ್ಮ ಹಿಜಾಬ್ಗಳನ್ನು ಸಾರ್ವಜನಿಕವಾಗಿ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಅವರೆಲ್ಲರೂ ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ಧಿಕ್ಕರಿಸಿದ್ದಕ್ಕಾಗಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಹಿಜಾಬ್ ವಿರೋಧಿ ಪ್ರತಿಭಟನೆಗಳ ಕರೆಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರು ಹಿಜಾಬ್ ತೆಗೆದು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಹಿಜಾಬ್ ಅನ್ನು ತೆಗೆದುಹಾಕಿದ ಮಹಿಳೆಯರ ವಿರುದ್ಧ ನೈತಿಕ ಪೊಲೀಸ್ ಘಟಕದ ಸಿಬ್ಬಂದಿ ಕ್ರಮಗಳನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲ ವಿಚಾರಣೆ ನೆಪದಲ್ಲಿ ಮಹಿಳೆಯರಿಗೆ ಮನಬಂದಂತೆ ಚಿತ್ರಹಿಂಸೆ ಮತ್ತು ಹಲ್ಲೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅಲ್ಲಿನ ಮಾಧ್ಯಮಗಳು ಬಿತ್ತರಿಸಿವೆ.
1979ರ ಕ್ರಾಂತಿಯ ನಂತರ ಹೇರಲಾದ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮಹಿಳೆಯರು ತಮ್ಮ ತಲೆಕೂದಲನ್ನು ಮುಚ್ಚಲು ಮತ್ತು ವ್ಯಕ್ತಿಗಳನ್ನು ಮರೆಮಾಚಲು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಲು ನಿರ್ಬಂಧವನ್ನು ಹೊಂದಿರುತ್ತಾರೆ. ಉಲ್ಲಂಘಿಸುವವರು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸಬೇಕಾಗುತ್ತದೆ ಇರಾನ್ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಹಿಜಾಬ್ ಪರ ನಿಂತ ಮುಸ್ಲಿಂ ವಿದ್ಯಾರ್ಥಿನಿಯರು.. ನಮ್ಮ ರಾಜ್ಯ ಮತ್ತು ದೇಶದಲ್ಲಿ ಹಿಜಾಬ್ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಸಮಾನತೆ ನೆಪದಲ್ಲಿ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲವೆಂದು ಮುಸ್ಲಿಂ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಓದಿ:ಶಾಲಾ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ: ಸುಪ್ರೀಂಕೋರ್ಟ್