ಇಟಲಿ:ವೆನಿಸ್ ನಗರದ ಬಳಿ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು 15 ಮೀಟರ್ (50 ಅಡಿ) ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ 21 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ವೆನಿಸ್ನ ಉಪ ನಗರವಾದ ಮೆಸ್ಟ್ರೆಯದಲ್ಲಿ ಮಂಗಳವಾರ ಈ ಭಾರೀ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 15 ಮಂದಿ ಬದುಕುಳಿದಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸವೇ ಮಾಡಬೇಕಾಯಿತು. ಮೃತರಲ್ಲಿ ಇಬ್ಬರು ಮಕ್ಕಳು, ಐವರು ಉಕ್ರೇನಿಯನ್ನರು ಮತ್ತು ಜರ್ಮನಿಯ ಒಬ್ಬರು ಸೇರಿದ್ದಾರೆ ಎಂದು ವೆನಿಸ್ ಪ್ರಿಫೆಕ್ಟ್ ಮಿಚೆಲ್ ಡಿ ಬಾರಿ ಮಾಹಿತಿ ನೀಡಿದ್ದಾರೆ.
ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ, ’’ಈ ಅಪಘಾತದಿಂದ ಆಘಾತವಾಗಿದೆ ಮತ್ತು ನಗರದಲ್ಲಿ ಈಗಾಗಲೇ ಶೋಕಾಚರಣೆ ಘೋಷಿಸಲಾಗಿದೆ‘‘ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಬಸ್ ಮೆಸ್ಟ್ರೆ ರೈಲ್ವೆ ಹಳಿಗಳ ಬಳಿ ಅಪಘಾತಕ್ಕೀಡಾಗುವ ಮೊದಲು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಎಂದು ವರದಿ ಮಾಡಿದೆ. ಇನ್ನು ಮೃತರ ಸಾವಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಂತಾಪ ಸೂಚಿಸಿದ್ದಾರೆ.