ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿ ಘೋಷಣೆ ಇಂದಿನಿಂದ ಆರಂಭವಾಗಲಿದ್ದು, ಅಕ್ಟೋಬರ್ 9ರವರೆಗೆ ಘೋಷಣೆ ನಡೆಯಲಿದೆ. ಸ್ಟಾಕ್ಹೋಮ್ನಲ್ಲಿರುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಾಣ ಕೊಡುಗೆ ನೀಡಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ನೊಬೆಲ್ ಮೂಲಕ ಗೌರವಿಸಲಿದೆ.
ಮೊದಲ ದಿನ ಅಂದರೆ ಇಂದು ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರ, ಅಕ್ಟೋಬರ್ 3 ರಂದು ಭೌತಶಾಸ್ತ್ರ, ಅ. 4ರಂದು ರಸಾಯನಶಾಸ್ತ್ರ, ಅ. 5ರಂದು ಸಾಹಿತ್ಯ ಕ್ಷೇತ್ರ, ಅ.6ರಂದು ಶಾಂತಿ, ಅ. 9 ರಂದು ಆರ್ಥಿಕ ವಿಜ್ಞಾನ ಕ್ಷೇತ್ರದಲ್ಲಿ ಸ್ವೆರಿಜನ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ. ಈ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಲು ಸಮಿತಿಗಳು ಸ್ಟಾಕ್ಹೋಮ್ ಹಾಗೂ ಓಸ್ಲೋದಲ್ಲಿ ಒಟ್ಟಾಗಿ ಸೇರುತ್ತವೆ. ಸ್ವೀಡಿಷ್ ರಾಜಧಾನಿಯ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ನ್ಯಾಯಾಧೀಶರ ಸಮಿತಿ ವೈದ್ಯಕೀಯ ಅಥವಾ ಶರೀರಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಿದೆ.
ಇದುವರೆಗೆ ಭಾರತದ, ರವೀಂದ್ರನಾಥ ಟಾಗೋರ್, ಸಿ. ವಿ. ರಾಮನ್, ಹರ್ ಗೋವಿಂದ್ ಖೊರಾನಾ, ಮದರ್ ತೆರೆಸಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಈ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಹ ನೊಬೆಲ್ ಪ್ರಶಸ್ತಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುವ ನೊಬೆಲ್ ಪ್ರಶಸ್ತಿಯನ್ನು 19ನೇ ಶತಮಾನದಲ್ಲಿ ಉದ್ಯಮಿ ಹಾಗೂ ರಸಾಯನಶಾಸ್ತ್ರಜ್ಞ ಅಲ್ಫ್ರೆಡ್ ನೊಬೆಲ್ ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ನೊಬೆಲ್ ಅವರ ಮರಣದ ಐದು ವರ್ಷಗಳ ನಂತರ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. 1968ರಲ್ಲಿ ಸ್ವೀಡನ್ನ ಕೇಂದ್ರ ಬ್ಯಾಂಕ್ ಅರ್ಥಶಾಸ್ತ್ರಕ್ಕಾಗಿ ಆರನೇ ಪ್ರಶಸ್ತಿಯನ್ನು ರಚಿಸಿ, ನೀಡಲಾರಂಭಿಸಿತು. ಅರ್ಥಶಾಸ್ತ್ರ ಕ್ಷೇತ್ರದಲ್ಲಿ ನೀಡುವ ಈ ಪ್ರಶಸ್ತಿ ತಾಂತ್ರಿಕವಾಗಿ ನೊಬೆಲ್ ಪ್ರಶಸ್ತಿಯಲ್ಲ ಎಂದು ನೊಬೆಲ್ ವಾದಕರು ಒತ್ತಿ ಹೇಳಿದರೂ, ಆ ಪ್ರಶಸ್ತಿಯನ್ನು ಯಾವಾಗಲೂ ನೊಬೆಲ್ ಪುರಸ್ಕೃತರ ಜೊತೆಗೆ ನೀಡಲಾಗುತ್ತದೆ.
ವಿವಿಧ ಕ್ಷೇತ್ರಗಳಲ್ಲಿ ನೀಡಲಾಗುವ ಈ ನೊಬೆಲ್ ಪ್ರಶಸ್ತಿ ವಿಜೇತರನ್ನು ವಿವಿಧ ಸಮಿತಿಗಳು ಆಯ್ಕೆ ಮಾಡುತ್ತವೆ. ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಪ್ರಶಸ್ತಿಗಳನ್ನು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸನ್ ಆಯ್ಕೆ ಮಾಡುತ್ತದೆ. ವೈದ್ಯಕೀಯ ಕ್ಷೇತ್ರದ ವಿಜೇತರನ್ನು ಕರೋಲಿನ್ಸ್ಕಾಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೇಜಿಯನ್ ನೊಬೆಲ್ ಸಮಿತಿ ಆಯ್ಕೆ ಮಾಡುತ್ತದೆ.