ವಾಷಿಂಗ್ಟನ್ (ಅಮೆರಿಕ):ನ್ಯಾಟೋ ಪಡೆಗಳ ವಿರುದ್ಧದ ಸೇಡಿಗೆ ಶುರುವಾದ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಅಮೆರಿಕದ ಶ್ವೇತಭವನ ರಷ್ಯಾದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ರಷ್ಯಾ ಗಡಿಯಲ್ಲಿ ಉಕ್ರೇನ್ ಸೇನೆ ಭೀಕರ ದಾಳಿ ನಡೆಸುತ್ತಿದೆ. ಉಕ್ರೇನ್ ನಡೆಸಿದ ಶೆಲ್ ಮತ್ತು ಕ್ಷಿಪಣಿ ದಾಳಿ ಪರಿಣಾಮ ರಷ್ಯಾ ಗಡಿ ಭಾಗದಲ್ಲಿ ರೈಲು ಹಳಿ ತಪ್ಪಿದೆ ಎನ್ನಲಾಗಿದೆ. ಈ ಘಟನೆಯಲ್ಲಿ 35 ಜನ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ವರದಿಯಾಗಿಲ್ಲ.
20 ಸಾವಿರ ಜನ ಸಾವು:ಕಳೆದೊಂದು ವರ್ಷದಿಂದ ಉಕ್ರೇನ್-ರಷ್ಯಾ ನಡುವಿನ ಯುದ್ಧ ನಡೆಯುತ್ತಲೇ ಇದೆ. ಪರಿಣಾಮ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈವರೆಗೆ ಎರಡೂ ಕಡೆ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ಭಾರಿ ದಾಳಿಯನ್ನು ಉಕ್ರೇನ್ ಹಿಮ್ಮೆಟ್ಟಿಸಿದ ಕಾರಣ ರಷ್ಯಾವೊಂದಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 1 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿದೆ.
ಯುದ್ಧ ಭೂಮಿವಾಗಿ ಮಾರ್ಪಟ್ಟಿರುವ ಪೂರ್ವ ಡೊನೆಟ್ಸ್ಕ್ ಪ್ರದೇಶದಲ್ಲಿ ಭೀಕರ ಕದನಗಳು ನಡೆದಿವೆ. ಅಲ್ಲಿ ರಷ್ಯಾವು ಬಖ್ಮುತ್ ನಗರವನ್ನು ಸುತ್ತುವರಿಯಲು ಉಕ್ರೇನಿಯನ್ ಸೈನ್ಯದ ವಿರುದ್ಧ ಹೋರಾಡುತ್ತಿದೆ ಎಂದು ಅಮೆರಿಕನ್ ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಡಿಸೆಂಬರ್‌ನಿಂದ ಕೊಲ್ಲಲ್ಪಟ್ಟ ಅರ್ಧದಷ್ಟು ಜನರು ರಷ್ಯಾ ಪಡೆಯವರು. ಅವರಲ್ಲಿ ಅನೇಕರು ರಷ್ಯಾದ ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳು ಎಂದು ಕಿರ್ಬಿ ವಿವರಿಸಿದ್ದಾರೆ.