ಕ್ಯಾಲಿಫೋರ್ನಿ(ಯುಎಸ್‌ಎ):ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕಂಟ್ರಿಯ ಗುರುದ್ವಾರದಲ್ಲಿ ಭಾನುವಾರ ಗುಂಡಿನ ದಾಳಿ ನಡೆದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುರುದ್ವಾರದಲ್ಲಿ ಆಯೋಜಿಸಲಾಗಿದ್ದ ಸಿಖ್ ಕಾರ್ಯಕ್ರಮದ ವೇಳೆ ಪರಸ್ಪರ ಪರಿಚಿತ ವ್ಯಕ್ತಿಗಳ ನಡುವೆ ಹೊಡೆದಾಟ ಆರಂಭವಾಗಿತ್ತು. ಗುಂಡಿನ ದಾಳಿ ದ್ವೇಷದ ಅಪರಾಧಕ್ಕೆ ಸಂಬಂಧಿಸಿಲ್ಲ ಎಂದು ಕೌಂಟಿ ಶೆರಿಫ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಮಧ್ಯಾಹ್ನ 2:30ರ(ಸ್ಥಳೀಯ ಕಾಲಮಾನ) ಸುಮಾರಿಗೆ ಗುರುದ್ವಾರದ ಮೈದಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದರು. ಶಂಕಿತರಲ್ಲಿ ಒಬ್ಬ ಭಾರತೀಯ ವ್ಯಕ್ತಿ ಎನ್ನಲಾಗಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದ. ನಂತರ ಮತ್ತೊಬ್ಬ ವ್ಯಕ್ತಿ ಆ ವ್ಯಕ್ತಿಗೆ ಗುಂಡು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡ. ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಶೂಟರ್‌ಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
"ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಇಬ್ಬರೂ ವ್ಯಕ್ತಿಗಳು 20-30ರ ಹರೆಯದವರಾಗಿದ್ದು, ಇಬ್ಬರೂ ಪರಸ್ಪರ ಗೊತ್ತಿರುವಂತೆ ತೋರುತ್ತಿದೆ. ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಗುಂಡಿನ ದಾಳಿಯ ಹಿಂದಿರುವ ಉದ್ದೇಶ ತಿಳಿದು ಬಂದಿಲ್ಲ. ಆರೋಪಿಗಳಿಗಾಗಿ ತನಿಖೆ ಆರಂಭಿಸಲಾಗಿದೆ" ಎಂದು ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಅಮರ್ ಗಾಂಧಿ ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.