ಜೆರುಸಲೇಂ :ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಶನಿವಾರ ಇಸ್ರೇಲ್ ಪ್ರದೇಶಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಕನಿಷ್ಠ 100 ಮಂದಿ ಬಲಿಯಾಗಿದ್ದರು. ದಾಳಿಯ ಕೆಲವೇ ಗಂಟೆಗಳ ನಂತರ, ಇಸ್ರೇಲ್ ಪ್ರತೀಕಾರವಾಗಿ ಪ್ಯಾಲೆಸ್ಟೇನ್ ಮೇಲೆ ನಡೆಸಿದ ದಾಳಿಯಲ್ಲಿ 198 ಜನರು ಸಾವಿಗೀಡಾಗಿ, 1600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಸ್ರೇಲ್ ವಿರುದ್ಧದ ಪ್ರತೀಕಾರ ದಾಳಿಯಲ್ಲಿ ಕನಿಷ್ಠ 198 ಜನರು ಸಾವು, 1,610 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಇಸ್ರೇಲ್ ಪಡೆಗಳು ಗಾಜಾದ ಮೇಲೆ ಹಲವಾರು ಕಡೆ ವೈಮಾನಿಕ ದಾಳಿಗಳನ್ನು ನಡೆಸಿದೆ. ಕರಾವಳಿ ಪ್ರದೇಶದ ಸುತ್ತಲಿನ ಗಡಿಯಲ್ಲಿ ಬಂದೂಕಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಹಮಾಸ್ ಹೋರಾಟಗಾರರು ಹಲವಾರು ಸ್ಥಳಗಳಲ್ಲಿ ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಇಸ್ರೇಲ್‌ನ ಗಡಿಗಳಲ್ಲಿ ನುಸುಳಿ ರಾಕೆಟ್‌ಗಳನ್ನು ಹಾರಿಸಿ ವಿಧ್ವಂಸಕ ಸೃಷ್ಟಿಸಿದ್ದರು.
ಹಮಾಸ್ ಉಗ್ರಗಾಮಿಗಳ ಹಠಾತ್ ಆಕ್ರಮಣದಿಂದಾಗಿ ಇಸ್ರೇಲಿನಲ್ಲಿ ಗುಂಡಿನ ಚಕಮಕಿಗೆ 100 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ರಾಷ್ಟ್ರೀಯ ರಕ್ಷಣಾ ಇಲಾಖೆ ತಿಳಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ದಕ್ಷಿಣ ಇಸ್ರೇಲಿ ನಗರವಾದ ಬೀರ್ಶೆಬಾದಲ್ಲಿರುವ ಸೊರೊಕಾ ವೈದ್ಯಕೀಯ ಕೇಂದ್ರವು ಕನಿಷ್ಠ 280 ಜನರಿಗೆ ಚಿಕಿತ್ಸೆ ನೀಡುತ್ತಿದೆ. ಅದರಲ್ಲಿ 60 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹಮಾಸ್ ಉಗ್ರರ ಘೋಷಣೆ:ಗಾಜಾದಲ್ಲಿ ಸಾವುನೋವುಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ದಾಖಲಾಗಿಲ್ಲವಾದರೂ, ಮೃತಪಟ್ಟ ಜನರ ಅಂತ್ಯಕ್ರಿಯೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮೃತರು ಯೋಧರೋ ಅಥವಾ ನಾಗರಿಕರೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಹಮಾಸ್ ಹೋರಾಟಗಾರರು ಬೀದಿಗಳಲ್ಲಿ ಕಳುವು ಮಾಡಿದ ಇಸ್ರೇಲಿ ಮಿಲಿಟರಿ ವಾಹನಗಳಲ್ಲಿ ಮೆರವಣಿಗೆ ಹೊರಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಮೃತ ಇಸ್ರೇಲಿ ಸೈನಿಕನನ್ನು ಎಳೆದಾಡಿದ ಪ್ಯಾಲೆಸ್ಟೀನಿಯನ್ನರು ದೇವರು ಶ್ರೇಷ್ಠ ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.
ಗುಡುಗಿದ ಇಸ್ರೇಲ್ ಪ್ರಧಾನಿ:ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ನ ಇಸ್ಲಾಮಿಕ್ ಹಮಾಸ್ ಉಗ್ರಗಾಮಿ ಪಡೆಯು ನಡೆಸಿದ ಹಠಾತ್ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಉತ್ತರ ನೀಡಿದ್ದಾರೆ. ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ ಎಂದು ಅವರು ಗುಡುಗಿದ್ದಾರೆ.
ದೂರದರ್ಶನದಲ್ಲಿ ಭಾಷಣ ಮಾಡಿದ ಪ್ರಧಾನಿ ನೆತನ್ಯಾಹು, ದಾಳಿಕೋರರ ವಿರುದ್ಧ ಕಾರ್ಯಾಚರಣೆಯಲ್ಲಿಲ್ಲ. ನಾನು ಯುದ್ಧದಲ್ಲಿದ್ದೇವೆ. ಶನಿವಾರ ಬೆಳಗ್ಗೆ ಇಸ್ರೇಲ್ ಮತ್ತು ಅದರ ನಾಗರಿಕರ ಮೇಲೆ ಹಮಾಸ್ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ಬೆಳಗ್ಗೆಯಿಂದಲೂ ಹಮಾಸ್ ವಿರುದ್ಧ ಹೋರಾಟದಲ್ಲಿದ್ದೇವೆ ಎಂದು ತಿಳಿಸಿದ್ದರು.
ಭಾರತೀಯರಿಗೂ ಅಲರ್ಟ್..ಇಸ್ರೇಲ್ನಲ್ಲಿರುವ ಎಲ್ಲಾ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಮತ್ತು ಈ ಸಂದರ್ಭದಲ್ಲಿ ಭಾರತೀಯರು ಯಾರೂ ಕೂಡ ಇಸ್ರೇಲ್-ಪ್ಯಾಲೆಸ್ಟೀನ್ ಪ್ರವಾಸ ಕೈಗೊಳ್ಳದಂತೆ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಠಾತ್ ದಾಳಿ.. 'ಯುದ್ಧ' ಘೋಷಿಸಿದ ಪ್ರಧಾನಿ ನೆತನ್ಯಾಹು