ಕಾಬೂಲ್ (ಆಫ್ಘಾನಿಸ್ತಾನ):ಕಾಬೂಲ್‌ನ ಶಿಕ್ಷಣ ಕೇಂದ್ರವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಬಾಂಬ್ ದಾಳಿ ಮಾಡಲಾಗಿದೆ.
ಕಾಬೂಲ್‌ನ ದಷ್ಟಿ ಬರ್ಚಿ ನೆರೆಹೊರೆಯಲ್ಲಿನ ಖಾಸಗಿ ಕಾಜ್ ಶಿಕ್ಷಣ ಕೇಂದ್ರದಲ್ಲಿ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ಸ್ಫೋಟದಿಂದ ತರಗತಿ ಕೊಠಡಿಗಳು ಸಂಪೂರ್ಣವಾಗಿ ಛಿದ್ರವಾಗಿದೆ.
ಮೃತ 19 ಜನರಲ್ಲಿ ಪದವೀಧರರು, ವಿದ್ಯಾರ್ಥಿನಿ, ವಿದ್ಯಾರ್ಥಿಗಳು ಸೇರಿದ್ದಾರೆ. ಇದರಲ್ಲಿ ಹೆಚ್ಚಾಗಿ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದವರಾಗಿದ್ದಾರೆ. ಈ ಕೇಂದ್ರವನ್ನು ಕಾಜ್ ಹೈಯರ್ ಎಜುಕೇಷನಲ್ ಸೆಂಟರ್ ಎಂದು ಕರೆಯಲಾಗುತ್ತದೆ.