ಲಾಹೋರ್, ಪಾಕಿಸ್ತಾನ:ಕೆಲವು ದಿನಗಳ ಹಿಂದೆ ಪೇಶಾವರದ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುವಾರ ಬಸ್ ಮತ್ತು ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಪೇಶಾವರದಿಂದ ನೈಋತ್ಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಸಿಂಧೂ ಹೆದ್ದಾರಿಯ ಕೊಹಾಟ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಸ್ - ಟ್ರಕ್ ಮುಖಾಮುಖಿ ಡಿಕ್ಕಿ:ಗುರುವಾರ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಬಸ್ ಆಗಮಿಸುತ್ತಿತ್ತು. ಈ ವೇಳೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಬ್ರೇಕ್ ಫೇಲ್ ಆಗಿತ್ತು ಎನ್ನಲಾಗಿದೆ. ಟ್ರಕ್‌ನ ಬ್ರೇಕ್ ವೈಫಲ್ಯವಾಗಿರುವುದರಿಂದ ಎದುರಿಗೆ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
17 ಜನ ಸಾವು: ಡಿಕ್ಕಿ ರಭಸಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 17 ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅಪಘಾತದಲ್ಲಿ ಗಾಯಗೊಂಡವರೊಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಪಘಾತವಾದ ಕೂಡಲೇ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ದೌಡಾಯಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು.
ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಿದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಬಳಿಕ ಮೃತ ಸಂಬಂಧಿಕರಿಗೆ ಮಾಹಿತ ರವಾನಿಸಿದರು. ಸುದ್ದಿ ತಿಳಿದ ಮೃತರ ಸಂಬಂಧಿಕರು ಆಸ್ಪತ್ರೆಯತ್ತ ದೌಡಾಯಿಸಿದರು. ತಮ್ಮವರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಂಗಾಮಿ ಮುಖ್ಯಮಂತ್ರಿ ಆಜಂ ಖಾನ್ ಸಂತಾಪ:ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದು, ಮೃತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್‌ನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯಪಾಲ ಹಾಜಿ ಗುಲಾಂ ಅಲಿ ಮತ್ತು ಉಸ್ತುವಾರಿ ಮುಖ್ಯಮಂತ್ರಿ ಅಜಂ ಖಾನ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಆತ್ಮಾಹುತಿ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ:ಈ ಹಿಂದೆ ಪಾಕಿಸ್ತಾನದ ಪೇಶಾವರದಲ್ಲಿ ಆತ್ಮಾಹುತಿ ದಾಳಿ ನಡೆದಿತ್ತು. ಮಸೀದಿ ಮೇಲೆ ನಡೆದ ಈ ದಾಳಿಯಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯಿಂದ ಪಾಕಿಸ್ತಾನ ಸರ್ಕಾರ ತತ್ತರಿಸಿದೆ. ಪಾಕಿಸ್ತಾನದ ತಾಲಿಬಾನ್‌ಗಳು ಪಾಕಿಸ್ತಾನದಲ್ಲಿ ಹಲವು ಪ್ರಮುಖ ದಾಳಿಗಳನ್ನು ನಡೆಸಿವೆ. ಪೇಶಾವರದಲ್ಲಿ ನಡೆದ ದಾಳಿಯ ನಂತರ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಕಳವಳ ವ್ಯಕ್ತಪಡಿಸಿದ್ದರು. ಮಸೀದಿಯಲ್ಲಿ ನಮಾಜ್ ವೇಳೆಯೂ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿಗಳು ನಡೆಯಲಾರಂಭಿಸಿವೆ ಎಂದು ಹೇಳಿದ್ದರು.
ಓದಿ:ಮೃತಪಟ್ಟ 109 ವರ್ಷದ ವೃದ್ಧೆ ಮತ್ತೆ ಜೀವಂತ; ನೆಚ್ಚಿನ ಚಾಟ್ ತಿಂದು ಮಾತು ಶುರು ಮಾಡಿದ ಅಜ್ಜಿ