ಲಾಹೋರ್ :ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳಲು ಗಲ್ಫ್ ಸಾಮ್ರಾಜ್ಯಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ ಯಾತ್ರಿಕರ ವೇಷದಲ್ಲಿದ್ದ 16 ಪಾಕಿಸ್ತಾನಿ ಭಿಕ್ಷುಕರನ್ನು ಸೌದಿ ಅರೇಬಿಯಾ ವಿಮಾನದಿಂದ ಕೆಳಗಿಳಿಸಿ ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಎರಡು ದಿನಗಳ ಹಿಂದೆ ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿ ಸೌದಿ ವಿಮಾನದಿಂದ ಭಿಕ್ಷುಕರನ್ನು ಹೊರ ಕಳುಹಿಸಿದೆ ಎಂದು ಪಾಕಿಸ್ತಾನದ ಡಾನ್ ದಿನ ಪತ್ರಿಕೆ ವರದಿ ಮಾಡಿದೆ.
ಎಫ್‌ಐಎ ಪ್ರಕಾರ, ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಒಳಗೊಂಡ ಗುಂಪು ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿದ್ದರು. ಉಮ್ರಾವು ಇಸ್ಲಾಮಿಕ್ ಮೆಕ್ಕಾ ತೀರ್ಥಯಾತ್ರೆಯಾಗಿದ್ದು, ಇದನ್ನು ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾಗಿದೆ.
ಎಫ್‌ಐಎ ಅಧಿಕಾರಿಗಳು ಪ್ರಶ್ನಿಸಿದಾಗ, ತಾವು ಸೌದಿ ಅರೇಬಿಯಾಕ್ಕೆ ಭಿಕ್ಷೆ ಬೇಡಲು ಹೋಗುತ್ತಿದ್ದೇವೆ ಎಂದು ಪ್ರಯಾಣಿಕರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪತ್ರಿಕೆ ತಿಳಿಸಿದೆ. ಭಿಕ್ಷಾಟನೆಯಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ತಮ್ಮ ಪ್ರಯಾಣದ ವ್ಯವಸ್ಥೆಯಲ್ಲಿ ತೊಡಗಿರುವ ಏಜೆಂಟರಿಗೆ ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಉಮ್ರಾ ವೀಸಾ ಅವಧಿ ಮುಗಿದ ನಂತರ ಅವರು ಪಾಕಿಸ್ತಾನಕ್ಕೆ ಮರಳಬೇಕಿತ್ತು. FIA ಹೆಚ್ಚಿನ ವಿಚಾರಣೆ ಮತ್ತು ಕಾನೂನು ಕ್ರಮಕ್ಕಾಗಿ ಪ್ರಯಾಣಿಕರನ್ನು ಬಂಧಿಸಿದೆ. ಸಾಗರೋತ್ತರ ಪಾಕಿಸ್ತಾನಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಸಾಗರೋತ್ತರ ಪಾಕಿಸ್ತಾನಿಗಳ ಮೇಲಿನ ಸೆನೆಟ್ ಸಮಿತಿಗೆ ಗಮನಾರ್ಹ ಪ್ರಮಾಣದ ಭಿಕ್ಷುಕರು ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಸಾಗುತ್ತಿದ್ದಾರೆ ಎಂದು ಬಹಿರಂಗಪಡಿಸಿದ ಒಂದು ದಿನದ ನಂತರ ಈ ಬಂಧನ ಕ್ರಮ ನಡೆದಿದೆ.
ವಿದೇಶಗಳಲ್ಲಿ ಬಂಧಿತರಾಗಿರುವ ಶೇ. 90ರಷ್ಟು ಭಿಕ್ಷುಕರು ಪಾಕಿಸ್ತಾನಕ್ಕೆ ಸೇರಿದವರು ಎಂದು ಸಚಿವಾಲಯದ ಕಾರ್ಯದರ್ಶಿ ಸೆನೆಟ್ ಸಮಿತಿಗೆ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನಿ ಭಿಕ್ಷುಕರು ಝಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ. ನಂತರ ಭಿಕ್ಷಾಟನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಕಳೆದ ತಿಂಗಳು ಸೆನೆಟ್‌ನ ಸ್ಥಾಯಿ ಸಮಿತಿಯ ಸಭೆಯಲ್ಲಿ ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಝೀಶಾನ್ ಖಾನ್ಜಾಡಾ ಹೇಳಿದ್ದರು.
ಮೆಕ್ಕಾದ ದೊಡ್ಡ ಮಸೀದಿಯೊಳಗಿಂದ ಬಂಧಿತರಾಗಿರುವ ಹೆಚ್ಚಿನ ಜೇಬುಗಳ್ಳರು ಪಾಕಿಸ್ತಾನಿ ಪ್ರಜೆಗಳು ಎಂದು ಖಾಂಜಾದಾ ಹೇಳಿರುವುದಾಗಿ ದಿ ಇಂಟರ್‌ನ್ಯಾಶನಲ್ ನ್ಯೂಸ್ ಡೈಲಿ ವರದಿ ಮಾಡಿದೆ. ಇಂಧನ ಮತ್ತು ಆಹಾರ ರಂಗಗಳಲ್ಲಿ ಬೆಲೆ ಏರಿಕೆಯ ನಡುವೆ ಗಗನಕ್ಕೇರುತ್ತಿರುವ ಹಣದುಬ್ಬರದೊಂದಿಗೆ ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದನ್ನೂ ಓದಿ:ಚೀನಾ, ಸೌದಿ ಅರೇಬಿಯಾದಿಂದ 11 ಶತಕೋಟಿ ಡಾಲರ್ ಸಹಾಯ ಬಯಸಿದ ಪಾಕಿಸ್ತಾನ