ಜಕಾರ್ತ (ಇಂಡೋನೇಷ್ಯಾ):ಸೋಮವಾರ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರಯಾಣಿಕರನ್ನು ತುಂಬಿದ್ದ ದೋಣಿ ಮುಳುಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 19 ಜನ ನಾಪತ್ತೆಯಾಗಿರುವ ಘಟನೆ ನಡೆದಿದೆ. ಆಗ್ನೇಯ ಸುಲವೆಸಿ ಪ್ರಾಂತ್ಯದ ಬುಟನ್ ಸೆಂಟ್ರಲ್ ರೀಜೆನ್ಸಿಯ ಲ್ಯಾಂಟೊ ಗ್ರಾಮದಿಂದ ಸಮೀಪದ ಲಾಗಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ದೋಣಿ ಸೋಮವಾರ ಮಗುಚಿ ಬಿದ್ದಿದೆ ಎಂದು ಬುಟನ್‌ನ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಅರಾಫಾ ಹೇಳಿದ್ದಾರೆ.
"20 ಜನರ ಸಾಮರ್ಥ್ಯದ ದೋಣಿಯಲ್ಲಿ 40 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಅತಿಯಾದ ಬಾರದಿಂದ ದೋಣಿ ಮಗುಚಿ ಬಿದ್ದಿದೆ. 15 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಇನ್ನೂ 19 ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಹಾಗೂ ಆರು ಜನರನ್ನು ರಕ್ಷಿಸಲಾಗಿದೆ. ಸಧ್ಯ ಪತ್ತೆಯಾಗಿರುವವರ ಶೋಧ ಕಾರ್ಯಾಚರಣೆ ಮುಂದುವರೆದಿದೆ. 15 ಮೃತ ದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ. ಮೂರು ರಕ್ಷಣಾ ದೋಣಿಗಳು, ಎರಡು ಮೀನುಗಾರಿಕಾ ದೋಣಿಗಳು ಮತ್ತು ಆರು ಜನ ಮುಳುಗು ತಜ್ಞರುಗಳನ್ನು ಹುಡುಕಾಟಕ್ಕೆ ನಿಯೋಜಿಸಲಾಗಿದೆ" ಎಂದು ಅರಾಫ್ ಹೇಳಿದ್ದಾರೆ.
ಇಂಡೋನೇಷ್ಯಾವು 17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ದ್ವೀಪಸಮೂಹವಾಗಿದ್ದು, ಜಲಸಾರಿಗೆ ಪ್ರಮುಖವಾಗಿದೆ. ಆದರೇ ಸಡಿಲವಾದ ಸುರಕ್ಷತಾ ಮಾನದಂಡಗಳು ಮತ್ತು ಸಾಮರ್ಥ್ಯಕ್ಕೂ ಮೀರಿ ಜನರ ಪ್ರಯಾಣದಿಂದ ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತಿವೆ.