ಹೈಟಿ ಪೋರ್ಟ್-ಔ-ಪ್ರಿನ್ಸ್ (ಹೈಟಿ):ಕೆರೇಬಿಯನ್ ರಾಷ್ಟ್ರ ಹೈಟಿಯಲ್ಲಿ ಕಂಡು ಕೇಳರಿಯದ ಪ್ರವಾಹ ತಲೆದೋರಿದೆ. ಈ ಭೀಕರ ಪ್ರವಾಹಕ್ಕೆ 15 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಘಟನೆಯಲ್ಲಿ ಸುಮಾರು 8ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಭಾರಿಯಿಂದ ಕೂಡಿದ ಭಾರಿ ಮಳೆಯಿಂದಾಗಿ ಹೈಟಿಯಾದ್ಯಂತ ವ್ಯಾಪಕವಾದ ಪ್ರವಾಹ ಮತ್ತು ಹಲವಾರು ಭೂಕುಸಿತಗಳು ಸಂಭವಿಸಿವೆ. ಭಾರೀ ಮಳೆಯಿಂದಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ.
ವಾರಾಂತ್ಯದ ಖುಷಿಯಲ್ಲಿ ಹೈಟಿ ಮಂದಿಗೆ ಧಾರಾಕಾರ ಮಳೆ ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ದೇಶದಾದ್ಯಂತ ನೂರಾರು ಮನೆಗಳು ನಾಶವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 13,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸತತವಾಗಿ ಸುರಿದ ಭಾರಿ ಮಳೆಗೆ ಜನವಸತಿ ಪ್ರದೇಶಗಳು ಕರೆ ಹಾಗೂ ನದಿಗಳಂತಾಗಿ ಪರಿವರ್ತನೆ ಆಗಿವೆ. ದಿಢೀರ್ ಎಂದು ಉಂಟಾಗಿರುವ ಪ್ರವಾಹಕ್ಕೆ ಸುಮಾರು 7,400 ಕ್ಕೂ ಹೆಚ್ಚು ಕುಟುಂಬಗಳು ದಿವಾಳಿ ಆಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಹೈಟಿ ಜನರನ್ನು ಹೈರಾಣಾಗಿಸಿರುವ ಮಳೆ, ಬೆಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಪ್ರವಾಹದಿಂದ ಸಂತ್ರಸ್ತರಾದವರ ಅಗತ್ಯಗಳಿಗೆ ಸ್ಪಂದಿಸಲು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ಹೇಳಿದ್ದಾರೆ