ಪಂಜಾಬ್ (ಪಾಕಿಸ್ತಾನ):ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಹಸಿವಿನಿಂದ ಬಳಲಿ ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಉಂಟಾಗಿದೆ. ದೇಶದಲ್ಲಿ ಗೋಧಿ ಹಿಟ್ಟು ಮಾತ್ರವಲ್ಲ, ದಿನನಿತ್ಯದ ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ. ಇದನ್ನು ತಪ್ಪಿಸಲು ಸರ್ಕಾರಿ ವಿತರಣಾ ಕೇಂದ್ರಗಳಲ್ಲಿ ಉಚಿತ ಹಿಟ್ಟು ನೀಡುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ.
ಕಾಲ್ತುಳಿತದಲ್ಲಿ ಹಲವರು ಸಾವು: ಪಂಜಾಬ್ ಪ್ರಾಂತ್ಯದ ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು ಪಡೆಯಲು ಪ್ರಯತ್ನಿಸುತ್ತಿರುವಾಗ ನೂಕಾಟ ತಳ್ಳಾಟ ನಡೆದಿದ್ದು, ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ದಕ್ಷಿಣ ಪಂಜಾಬ್‌ನ ಸಾಹಿವಾಲ್, ಬಹವಾಲ್‌ಪುರ್, ಮುಜಾಫರ್‌ಗಢ, ಒಕಾರಾ, ಫಸಿಲಾಬಾದ್, ಜೆಹಾನಿಯನ್ ಮತ್ತು ಮುಲ್ತಾನ್ ಜಿಲ್ಲೆಗಳ ಕೇಂದ್ರಗಳಲ್ಲಿ ಇತ್ತೀಚೆಗೆ ಇಂಥದ್ದೇ ಘಟನೆಗಳು ನಡೆದಿವೆ.
ಹಣದುಬ್ಬರ ನಿಯಂತ್ರಿಸಲು ಪಾಕ್ ಯೋಜನೆ: ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಗಗನಕ್ಕೇರುತ್ತಿರುವ ಹಣದುಬ್ಬರ ಮಟ್ಟಕ್ಕೆ ಕಡಿವಾಣ ಹಾಕಲು ವಿಶೇಷವಾಗಿ ಪಂಜಾಬ್ ಪ್ರಾಂತ್ಯದ ಬಡವರಿಗೆ ಉಚಿತ ಗೋಧಿ ಹಿಟ್ಟು ವಿತರಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಅಪಾರ ಜನಸಂದಣಿಯಿಂದಾಗಿ ಕಳೆದ ಕೆಲವು ದಿನಗಳಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಪೊಲೀಸರಿಂದ ಲಾಠಿ ಚಾರ್ಜ್:ಉಚಿತ ಹಿಟ್ಟು ವಿತರಣೆಗಾಗಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಜನರ ನೂಕುನುಗ್ಗಲು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಕಾಲ್ತುಳಿತದಂಥ ಘಟನೆಗಳು ಸಂಭವಿಸಿವೆ. ಅಲ್ಲದೇ ಮುಜಾಫರ್‌ಘರ್ ಮತ್ತು ರಹೀಮ್ ಯಾರ್ ಖಾನ್ ನಗರಗಳಲ್ಲಿ ಜನರು ಹಿಟ್ಟು ಸಾಗಿಸುತ್ತಿದ್ದ ಟ್ರಕ್‌ಗಳನ್ನು ಜನರು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ. ಇದಾದ ನಂತರ ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಉಚಿತ ಹಿಟ್ಟು ಪಡೆಯಲು ಉದ್ದನೆಯ ಸರತಿಯಲ್ಲಿ ಕಾಯುತ್ತಿರುವ ನಾಗರಿಕರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಜನರು ದೂರಿದ್ದಾರೆ.