ದುಬೈ:ಇರಾನ್‌ನಲ್ಲಿ 2020ರ ಅಮೆರಿಕ ಡ್ರೋನ್ ದಾಳಿಯಲ್ಲಿ ಹತನಾದ ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬುಧವಾರ ಎರಡು ನಿಮಿಷಗಳ ಅಂತರದಲ್ಲಿ ಸರಣಿ ಸ್ಫೋಟಗಳು ಸಂಭವಿಸಿ, ಕನಿಷ್ಠ 103 ಜನರು ಸಾವನ್ನಪ್ಪಿದ್ದರೆ, ಮತ್ತೆ 141 ಮಂದಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
2020ರ ಜನವರಿಯಲ್ಲಿ ಇರಾಕ್‌ನಲ್ಲಿ ಯುಎಸ್ ನಡೆಸಿದ್ದ ಡ್ರೋನ್ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ನ ಕುಡ್ಸ್ ಫೋರ್ಸ್‌ನ ಮುಖ್ಯಸ್ಥ ಜನರಲ್ ಖಾಸಿಂ ಸುಲೇಮಾನಿ ಹತರಾಗಿದ್ದರು. ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆರ್ಮನ್‌ನಲ್ಲಿರುವ ಸುಲೇಮಾನಿ ಸಮಾಧಿ ಸ್ಥಳದ ಬಳಿ ಈ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಮೊದಲ ಸ್ಫೋಟ ಸಂಭವಿಸಿದ 15 ನಿಮಿಷಗಳ ನಂತರ ಎರಡನೇ ಸ್ಫೋಟ ನಡೆದಿದೆ. ಈ ಎರಡನೇ ಸ್ಫೋಟವನ್ನು ತುರ್ತು ಸೇವೆಗಳ ಸಿಬ್ಬಂದಿಯನ್ನು ಗುರಿಯಾಗಿಸಿ ಮತ್ತು ಹೆಚ್ಚಿನ ಸಾವು-ನೋವುಗಳನ್ನು ಉಂಟುಮಾಡುವ ಉದ್ದೇಶದಿಂದ ಸ್ಫೋಟಿಸಲಾಗಿದೆ ಎಂದು ವರದಿಗಳು ಹೇಳಿವೆ. ಈ ದಾಳಿಯನ್ನು ಉಲ್ಲೇಖಿಸದೆ ಕೆರ್ಮನ್‌ನ ಡೆಪ್ಯುಟಿ ಗವರ್ನರ್ ರೆಹಮಾನ್ ಜಲಾಲಿ, ಇದೊಂದು ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದಾರೆ.
ಖಾಸಿಂ ಸುಲೇಮಾನಿ ಯಾರು?: ಸುಲೇಮಾನಿ ಇರಾನ್‌ನ ಪ್ರಾದೇಶಿಕ ಮಿಲಿಟರಿ ಚಟುವಟಿಕೆಗಳ ಶಿಲ್ಪಿ ಎಂದೇ ಹೆಸರು ಮಾಡಿದ್ದರು. ಅಲ್ಲದೇ. ಇರಾನ್‌ನ ಬೆಂಬಲಿಗರಲ್ಲಿ ರಾಷ್ಟ್ರೀಯ ಐಕಾನ್ ಆಗಿ ಖ್ಯಾತಿ ಪಡೆದಿದ್ದರು. ಸಿರಿಯನ್ ಅಧ್ಯಕ್ಷ ಬಶರ್ ಅಸ್ಸಾದ್ ವಿರುದ್ಧ 2011ರಲ್ಲಿ ಅರಬ್ ಸ್ಪ್ರಿಂಗ್ ಪ್ರತಿಭಟನೆ ಶುರುವಾಗಿತ್ತು. ಇದು ಯುದ್ಧವಾಗಿ ಮಾರ್ಪಟ್ಟಿತ್ತು. ಆಗ ಬಶರ್ ಅಸ್ಸಾದ್ ಸರ್ಕಾರವನ್ನು ಸುಲೈಮಾನಿ ರಕ್ಷಿಸಿದ್ದರು.
ಸುಲೇಮಾನಿ ಇರಾನ್‌ನ ಯುದ್ಧಭೂಮಿ ಕಮಾಂಡರ್ ಆಗಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ಕರೆಗಳನ್ನು ಅವರು ನಿರ್ಲಕ್ಷಿಸಿದ್ದರು. ಆದರೆ, ತಮ್ಮ ನಾಗರಿಕ ನಾಯಕತ್ವಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿ ಅವರು ಬೆಳೆದಿದ್ದರು. ಅಮೆರಿಕದ ಆಗಿನ ಅಧ್ಯಕ್ಷ ಟ್ರಂಪ್ ಆಡಳಿತವು ಇರಾನ್ ಮೇಲೆ ಡ್ರೋನ್ ದಾಳಿ ಆರಂಭಿಸಿತ್ತು. ಇದರಲ್ಲಿ ಖಾಸಿಂ ಸುಲೈಮಾನಿ ಹತರಾಗಿದ್ದರು.
ಈ ಹಿಂದೆ ಸುಲೇಮಾನಿ ನಿಧನದ ವೇಳೆ ದೊಡ್ಡ ಮೆರವಣಿಗೆಗಳು ನಡೆದಿದ್ದವು. 2020ರಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಕೆರ್ಮನ್‌ನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿದ್ದರು. ಆಗ ಕನಿಷ್ಠ 56 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಇಸ್ರೇಲ್ ಡ್ರೋನ್ ದಾಳಿ: ಹಮಾಸ್ ಉಪನಾಯಕ ಸಲೇಹ್ ಅಲ್ ಅರೂರಿ ಸಾವು