ನವದೆಹಲಿ:ಟರ್ಕಿ ಮತ್ತು ಸಿರಿಯಾವನ್ನು ಭೂಕಂಪನ ಬುಡಮೇಲು ಮಾಡಿದೆ. ಪ್ರಕೃತಿ ವಿಕೋಪಕ್ಕೆ 5 ಸಾವಿರಕ್ಕೂ ಅಧಿಕ ಜನರು ಜೀವಂತ ಸಮಾಧಿಯಾಗಿದ್ದಾರೆ. ಭಾರತದ ರಕ್ಷಣಾ ಪಡೆಯ 51 ಸಿಬ್ಬಂದಿ ಪಡೆ ಅಗತ್ಯ ಸಾಮಗ್ರಿಗಳ ಸಮೇತ ಇಂದು ಬೆಳಗ್ಗೆ ಟರ್ಕಿಯನ್ನು ತಲುಪಿದೆ. ಇನ್ನೂ 50 ಜನರ ಎರಡನೇ ತಂಡ ತೆರಳಲು ಸಜ್ಜಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್, ಕೋಲ್ಕತ್ತಾದ ಎನ್ಡಿಆರ್ಎಫ್ನ 2 ನೇ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಗುರ್ಮಿಂದರ್ ಸಿಂಗ್ ನೇತೃತ್ವದಲ್ಲಿ 101 ರಕ್ಷಕರ ತುಕಡಿಯು ಟರ್ಕಿಯ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದರು.
51 ಜನರಿರುವ ಎನ್‌ಡಿಆರ್‌ಎಫ್ ಪಡೆ:ಈ ಕಷ್ಟಕರ ಸಮಯದಲ್ಲಿ ಟರ್ಕಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಐವರು ಮಹಿಳಾ ಸಿಬ್ಬಂದಿ ಸೇರಿದಂತೆ 51 ರಕ್ಷಕರನ್ನು ಹೊಂದಿರುವ ಒಂದು ತಂಡ ಮತ್ತು ಶ್ವಾನದಳವು ಇಂದು ಮುಂಜಾನೆ 3 ಗಂಟೆಗೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ಟರ್ಕಿಗೆ ತೆರಳಿತು. ಏಳೂವರೆ ಗಂಟೆಗಳ ಪ್ರಯಾಣದ ನಂತರ 10.30 ಗಂಟೆಗೆ ಟರ್ಕಿಯ ಅದಾನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಎರಡನೆಯ ತಂಡವು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಹೊರಡಲಿದೆ ಎಂದು ತಿಳಿಸಿದರು.
ಎನ್ಡಿಆರ್ಎಫ್ನ ಎರಡೂ ತಂಡಗಳೊಂದಿಗೆ ಕೆಲವು ವಾಹನಗಳನ್ನು ಕಳುಹಿಸುತ್ತಿದೆ. ಸ್ಥಳೀಯ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಒದಗಿಸಲು ಸಮಸ್ಯೆಯಾಗಬಹುದು ಎಂದು ನಮಗೆ ತಿಳಿಸಿದ್ದಾರೆ. ಹೀಗಾಗಿ ವಾಹನಗಳೊಂದಿಗೆ ಕಳುಹಿಸಲಾಗಿದೆ. ತಂಡ ಮತ್ತು ರಕ್ಷಕರ ಆರೈಕೆಗಾಗಿ ವೈದ್ಯರಿದ್ದಾರೆ. ಸಂತ್ರಸ್ತರಿಗೆ ನಾವು ಸಹಾಯ ಮಾಡಲಿದ್ದೇವೆ ಎಂದು ಹೇಳಿದರು.