ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ವೆಲ್ಲಿಂಗ್ಟನ್‌ನ ನಾಲ್ಕು ಅಂತಸ್ತಿನ ಹಾಸ್ಟೆಲ್‌ನಲ್ಲಿ ಮಂಗಳವಾರ ಭಾರಿ ಅಗ್ನಿ ದುರಂತವೊಂದು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಜಿಲ್ಯಾಂಡ್ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ನಗರ ಶೋಧ ಮತ್ತು ರಕ್ಷಣಾ ಸಿಬ್ಬಂದಿ ವೆಲ್ಲಿಂಗ್ಟನ್ ಹಾಸ್ಟೆಲ್‌ನ ಹೊಗೆಯಾಡುತ್ತಿರುವ ಭಗ್ನಾವಶೇಷಗಳಿಂದ ಬದುಕುಳಿದವರಿಗಾಗಿ ಕಾರ್ಯಾಚರಣೆ ನಡಸುತ್ತಿದ್ದಾರೆ. ರಾತ್ರಿಯಿಡೀ ಸಂಭವಿಸಿದ ಭೀಕರ ಬೆಂಕಿ ಕೆನ್ನಾಲಿಗೆಗೆ 10 ಜನರು ಜೀವ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಅವರು ಈ ದುರ್ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಇನ್ನೂ ಹೆಚ್ಚಿನ ಸಾವು ನೋವಿನ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ 12:30 ರ ಸುಮಾರಿಗೆ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ಗೆ ಅಗ್ನಿ ಶಾಮಕ ದಳಗಳನ್ನು ಕರೆಯಲಾಗಿದೆ. ಬೆಂಕಿ - ನಂದಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮೆಕ್ಸಿಕೋ: ಟ್ರಕ್-ವ್ಯಾನ್ ಡಿಕ್ಕಿಯಾಗಿ 26 ಜನರ ದಾರುಣ ಸಾವು
ಆದರೆ ಕಟ್ಟಡದಲ್ಲಿ ಅಗ್ನಿ ನಂದಿಸುವ ವ್ಯವಸ್ಥೆ ಇರಲಿಲ್ಲ. ಅಗ್ನಿ ಶಮನಕ್ಕೆ ಬೇಕಾದ ಸ್ಪ್ರಿಂಕ್ಲರ್‌ಗಳಿರಲಿಲ್ಲ ಎಂದು ಅಧಿಕಾರಿಗಳು ಇದೇ ವೇಳೆ ದೃಢಪಡಿಸಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.