ವಾಷಿಂಗ್ಟನ್(ಅಮೆರಿಕ): ಅಮೆರಿಕದಲ್ಲಿ ನಡೆದ ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ 10 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಗೆಲುವು ಸಾಧಿಸಿದ್ದಾರೆ. ಗೆದ್ದವರಲ್ಲಿ ಹೆಚ್ಚಿನವರು ಡೆಮೋಕ್ರಟಿಕ್ ಪಕ್ಷಕ್ಕೆ ಸೇರಿದವರು. ಭಾರತೀಯ ಅಮೆರಿಕನ್ ಸಮುದಾಯವು ಒಟ್ಟು ಅಮೆರಿಕದ ಜನಸಂಖ್ಯೆಯಲ್ಲಿ ಶೇ.1ರಷ್ಟಿದ್ದು, ಇವರ ಗೆಲುವು ಭಾರತೀಯ ಸಮುದಾಯವು ಅಮೆರಿಕದಲ್ಲಿ ರಾಜಕೀಯ ಸಬಲೀಕರಣ ಹೊಂದುತ್ತಿರುವುದನ್ನು ಸೂಚಿಸುತ್ತದೆ.
ವರ್ಜಿನಿಯಾದಲ್ಲಿ ಹೈದರಾಬಾದ್ ಮೂಲದ ಘಜಾಲಾ ಹಶ್ಮಿ ಮತ್ತೊಮ್ಮೆ ಸ್ಟೇಟ್ ಸೆನೆಟ್ ಆಗಿ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಘಜಾಲಾ ಅವರು ವರ್ಜಿನಿಯಾದಿಂದ ಆಯ್ಕೆಯಾದ ಮೊಟ್ಟ ಮೊದಲ ಭಾರತೀಯ ಅಮೆರಿಕನ್ ಮಹಿಳೆಯಾಗಿದ್ದು, ವರ್ಜಿನಿಯಾದಿಂದ ಆಯ್ಕೆ ಆದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸುಹಾಸ್ ಸುಬ್ರಹ್ಮಣ್ಯಂ ಅವರು ವರ್ಜಿನಿಯಾದ ಸ್ಟೇಟ್ ಸೆನೆಟ್ ಆಗಿ ಆಯ್ಕೆ ಆಗಿದ್ದಾರೆ. ಇದಕ್ಕೂ ಮೊದಲು 2019 ಮತ್ತು 2021ರಲ್ಲಿ ಸೆನೆಟ್ ಆಗಿ ಆಯ್ಕೆ ಆಗಿದ್ದರು. ಇವರು ಒಬಾಮಾ ಅವರ ಆಡಳಿತಾವಧಿಯಲ್ಲಿ ಶ್ವೇತ ಭವನದ ಮಾಜಿ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ವರ್ಜಿನಿಯಾದಿಂದ ಆಯ್ಕೆಯಾದ ಮೊದಲ ಹಿಂದೂ ಸೆನೆಟ್ ಇವರಾಗಿದ್ದಾರೆ. ಉದ್ಯಮಿ ಕಣ್ಣನ್ ಶ್ರೀನಿವಾಸನ್ ಭಾರತೀಯ ಅಮೆರಿಕನ್ ಜನರು ಹೆಚ್ಚಿರುವ ಲೌಂಡನ್ ಕೌಂಟಿ ಕ್ಷೇತ್ರದಿಂದ ಗೆದ್ದಿದ್ದು, ವರ್ಜಿನಿಯಾದಿಂದ ಗೆದ್ದು ಬಂದ ಮೂವರು ಡೆಮೋಕ್ರಟಿಕ್ ಪಕ್ಷದ ಸದಸ್ಯರಾಗಿದ್ದಾರೆ.