ತಪಾಚುಲಾ(ಮೆಕ್ಸಿಕೊ):ಗ್ವಾಟೆಮಾಲಾ ಗಡಿಯ ಸಮೀಪ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯಲ್ಲಿ ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ ಕ್ಯೂಬಾದ 10 ವಲಸಿಗರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ಕ್ಯೂಬನ್ ವಲಸಿಗರೆಲ್ಲರೂ ಮಹಿಳೆಯರಾಗಿದ್ದು, ಒಬ್ಬ ಬಾಲಕಿಯೂ ಇದರಲ್ಲಿ ಸೇರಿದ್ದಾಳೆ ಎಂದು ರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.
ಗ್ವಾಟೆಮಾಲನ್ ಗಡಿಯಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಪಿಜಿಜಿಯಾಪಾನ್ ಪಟ್ಟಣದ ಸಮೀಪವಿರುವ ಹೆದ್ದಾರಿಯಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದ್ದು, ಚಿಯಾಪಾಸ್ ರಾಜ್ಯದ ನಾಗರಿಕ ರಕ್ಷಣಾ ಕಚೇರಿ ಸ್ಪಷ್ಟನೆ ನೀಡಿದೆ. ಅಪಘಾತಗೊಂಡ ಟ್ರಕ್ 27 ವಲಸಿಗರನ್ನು ಹೊತ್ತೊಯ್ಯುತ್ತಿದ್ದು, ಚಾಲಕ ವೇಗವಾಗಿ ವಾಹನ ಚಲಾವಣೆ ಮಾಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಟ್ರಕ್, ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ.
ಮೆಕ್ಸಿಕನ್ ಅಧಿಕಾರಿಗಳು ಸರಿಯಾದ ದಾಖಲೆಗಳಿಲ್ಲದ ವಲಸಿಗರನ್ನು ಕರೆದುಕೊಂಡು ಹೋಗುವ ಬಸ್ಗಳ ಮೇಲೆ ನಿಷೇಧ ಹೇರುವುದು ಕಾಮನ್. ಹೀಗಾಗಿ ಹಣವಿಲ್ಲದ ವಲಸಿಗರು ಸಾಮಾನ್ಯವಾಗಿ ಹೆದ್ದಾರಿಗಳ ಬದಿಯಲ್ಲಿ ನಡೆದುಕೊಂಡೇ ಹೋಗುತ್ತಾರೆ. ಅಷ್ಟೇ ಅಲ್ಲ ದಾರಿಯಲ್ಲಿ ಸಂಚರಿಸುವ ಲಾರಿಗಳಿಗೆ ಕೈ ಹೊಡೆದು ಅದರಲ್ಲಿ ಪ್ರಯಾಣ ಮಾಡುತ್ತಾರೆ.
ಶನಿವಾರವೂ ಅಪಘಾತ ಓರ್ವ ವಲಸಿಗ ಸಾವು: ಮೆಕ್ಸಿಕೋದ ವಲಸೆ ಏಜೆನ್ಸಿ ನಿರ್ವಹಿಸುವ ವ್ಯಾನ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈಕ್ವೆಡಾರ್‌ನ ವಲಸಿಗರೊಬ್ಬರು ಮೃತಪಟ್ಟು, ಕೊಲಂಬಿಯಾ ಮತ್ತು ಗ್ವಾಟೆಮಾಲಾದ 10 ಮಂದಿ ಗಾಯಗೊಂಡಿದ್ದರು. ಕ್ಯಾಲಿಫೋರ್ನಿಯಾದ ಕ್ಯಾಲೆಕ್ಸಿಕೊದಿಂದ ಗಡಿಯಾಚೆಗಿನ ಮೆಕ್ಸಿಕಾಲಿ ನಗರದಲ್ಲಿ ಬಸ್‌ಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎಂದು ಮೆಕ್ಸಿಕೊದ ರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.