ಟೆಲ್ ಅವಿವ್ (ಇಸ್ರೇಲ್) : ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಶನಿವಾರ ಮುಂಜಾನೆ ಇಸ್ರೇಲ್ ಪ್ರದೇಶಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯ ಬಳಿಕ ಇಸ್ರೇಲ್ ಸರ್ಕಾರವು ಯುದ್ಧ ಘೋಷಿಸಿದ್ದು, ನಾಗರಿಕರು ಮನೆಯೊಳಗೆ ಇರುವಂತೆ ಸಲಹೆ ನೀಡಿದೆ.
ಮಾಹಿತಿ ಪ್ರಕಾರ, ಗಾಜಾ ಪಟ್ಟಿಯಿಂದ ಇಸ್ರೇಲ್‌ನ ಅನೇಕ ವಸತಿ ಪ್ರದೇಶಗಳ ಮೇಲೆ ರಾಕೆಟ್‌ಗಳನ್ನು ಹಾರಿಸಲಾಗಿದೆ. ರಾಜಧಾನಿ ಟೆಲ್ ಅವಿವ್ ಸೇರಿದಂತೆ ಅನೇಕ ಕಡೆ ಸೈರನ್ ಸಹಾಯದಿಂದ ವೈಮಾನಿಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಭಾರಿ ಒಳನುಸುಳುವಿಕೆ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಂದು ಮುಂಜಾನೆ ನಡೆದ ಈ ಬಾಂಬ್ ದಾಳಿಯು ಸುಮಾರು 30 ನಿಮಿಷಗಳ ಕಾಲ ನಡೆಯಿತು. ದಕ್ಷಿಣ ಇಸ್ರೇಲ್‌ನ ಕಟ್ಟಡವೊಂದರ ಮೇಲೆ ರಾಕೆಟ್ ಬಿದ್ದ ಪರಿಣಾಮ 70 ವರ್ಷದ ಮಹಿಳೆ ಸೇರಿ ನಾಲ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ತಿಳಿಸಿದೆ.
ಗಾಜಾ ಪಟ್ಟಿಯಿಂದ ಸುಮಾರು 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಟೆಲ್ ಅವಿವ್‌ನಲ್ಲಿ ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನೊಂದೆಡೆ, ವೈಮಾನಿಕ ದಾಳಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಅವೀವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಗೆ ತೆರಳಿದ್ದು, ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.