ವಾಷಿಂಗ್ಟನ್:ಗಾಜಾದಲ್ಲಿರುವಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಗಳನ್ನು ಹೊಂದಿದ್ದ ಬಹುಮಹಡಿ ಕಟ್ಟಡ ಹಾಗೂ ವಸತಿ ಸಮುಚ್ಚಯಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಈ ಘಟನೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿ, ಹಮಾಸ್ ಉಗ್ರರ ವಿರುದ್ಧದ ಇಸ್ರೇಲ್ ದಾಳಿ ಸೂಕ್ತವೆನಿಸಿದರೂ ಸಾವುನೋವು ಕಳವಳಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ಹಮಾಸ್ ಉಗ್ರರ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿದ ದಾಳಿ ಸೂಕ್ತವಾಗಿರಬಹುದು. ಆದರೆ ಘಟನೆಯಲ್ಲಿ ಸಂಭವಿಸಿದ ಸಾವು ನೋವು ಮತ್ತು ಪತ್ರಕರ್ತರ ರಕ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ದೂರವಾಣಿ ಮಾತುಕತೆ ವೇಳೆ ಬೈಡನ್ ತಿಳಿಸಿದ್ದಾರೆ.
ಉಭಯ ನಾಯಕರು ವಿವಾದದ ಕೇಂದ್ರಬಿಂದು ಜೆರುಸಲೆಂ ನಗರದ ಬಗ್ಗೆ ಮಾತನಾಡಿದ್ದಾರೆ. ಜೆರುಸಲೆಂ ಎಲ್ಲಾ ಧರ್ಮ ಮತ್ತು ಹಿನ್ನೆಲೆಯ ಜನರಿಗೆ ಶಾಂತಿಯುತ ಸಹಬಾಳ್ವೆಯ ಸ್ಥಳವಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ. ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಬೈಡನ್ ಈ ಮೊದಲು ಹಿಂಸಾಚಾರದ ಬಗ್ಗೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್: 13 ಮಹಡಿ ದೂರದರ್ಶನ ಕಟ್ಟಡ ನೆಲಸಮ