ಜೆರುಸಲೇಂ( ಇಸ್ರೇಲ್): ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ ತೊರೆದಿದ್ದ ಉಕ್ರೇನಿಯನ್ ಓಟಗಾರ್ತಿಯೊಬ್ಬರು ಶಾಂತಿಗಾಗಿ ದೇಶದ ಪರವಾಗಿ ಜೆರುಸಲೇಂನ ವಾರ್ಷಿಕ ಮ್ಯಾರಾಥಾನ್ನಲ್ಲಿ ಓಡಲಿದ್ದಾರೆ. ಫೆಬ್ರವರಿ 24 ರಂದು ತನ್ನ 11 ವರ್ಷದ ಮಗಳೊಂದಿಗೆ ಮೈಕೊಲೈವ್‌ನಲ್ಲಿರುವ ಮನೆಯಿಂದ ಪಲಾಯನ ಮಾಡಬೇಕಾಯಿತು. ಆದರೆ, ದೇಶದಲ್ಲಿ ಶಾಂತಿ ನೆಲಸಬೇಕು ಎಂಬುದು ನನ್ನ ಮನದಾಳವಾಗಿದ್ದು, ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಒತ್ತಡದ ಹೊರತಾಗಿಯೂ ಓಟದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ವೃತ್ತಿಪರ ಓಟಗಾರ್ತಿ ವ್ಯಾಲೆಂಟಿನಾ ವೆರೆಟ್ಸ್ಕಾ ಹೇಳಿದ್ದಾರೆ.
31 ವರ್ಷದ ವೆರೆಟ್ಸ್ಕಾ ಮಹಿಳೆಯರ ಮ್ಯಾರಥಾನ್‌ನಲ್ಲಿ 444 ನೇ ಶ್ರೇಯಾಂಕವನ್ನು ಪಡೆದಿದ್ದಾರೆ ಎಂದು ವರ್ಲ್ಡ್ ಅಥ್ಲೆಟಿಕ್ಸ್ ಹೇಳಿದೆ. ಇತ್ತೀಚೆಗೆ ಅಂದರೆ ಕಳೆದ ಅಕ್ಟೋಬರ್ 2021 ಟಿರಾನಾ ಮ್ಯಾರಥಾನ್‌ನಲ್ಲಿ ವೆರೆಟ್ಸ್ಕಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ತೊರೆದಿದ್ದ ಅವರು ನೆರೆಯ ರಾಷ್ಟ್ರ ಪೋಲೆಂಡ್ನಲ್ಲಿ ಆಶ್ರಯ ಪಡೆದಿದ್ದಾರೆ. ಈ ತಿಂಗಳ ಆರಂಭದಲ್ಲಿ ಜೆರುಸಲೇಂ ಮ್ಯಾರಥಾನ್‌ನಲ್ಲಿ ಭಾಗವಹಿಸಲು ವೆರೆಟ್ಸ್ಕಾಗೆ ಆಹ್ವಾನ ಬಂದಿತ್ತು.
ಈ ನಡುವೆ ಓಟಗಾರ್ತಿ ವೆರೆಟ್ಸ್ಕಾ ಪತಿ ಉಕ್ರೇನ್‌ನಲ್ಲಿ ಉಳಿದಿದ್ದಾರೆ ಎಂಬುದು ಗಮನಾರ್ಹ. ಇಂದು ನಡೆಯುವ ಮ್ಯಾರಾಥಾನ್ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಯುದ್ಧಪೀಡಿತ ಉಕ್ರೇನ್ನ 40 ವಲಸಿಗರು ಮತ್ತು ನಿರಾಶ್ರಿತರು ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಓಡುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.