ದುಬೈ:ಕೊರೊನಾ ಲಸಿಕೆಯನ್ನು ಉತ್ಪಾದನೆ ಮಾಡಲು ಜಗತ್ತಿನ ರಾಷ್ಟ್ರಗಳು ಪೈಪೋಟಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದಿಸಿರುವ ಕೊರೊನಾ ಲಸಿಕೆ ಶೇಕಡಾ 86ರಷ್ಟು ಪರಿಣಾಮಕಾರಿಯಾಗಿದೆ ಎಂದು ಯುನೈಟೆಡ್ ಅರಬ್ ಎಮಿರೈಟ್ಸ್ ಸರ್ಕಾರ ಹೇಳಿದೆ.
ಚೀನಾ ಸೈನೋಫಾರ್ಮ್ ಎಂಬ ಕೊರೊನಾ ಲಸಿಕೆಯನ್ನು ಉತ್ಪಾದನೆ ಮಾಡಿದ್ದು, ಈ ಲಸಿಕೆ ಪ್ರಯೋಗದ ವೇಳೆ ಯಾರಿಗೂ ಗಂಭೀರವಾದ ಅಡ್ಡ ಪರಿಣಾಮಗಳಾಗಿಲ್ಲ ಎಂದು ಯುಎಇಯ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಈಗ ಸದ್ಯಕ್ಕೆ ಮೂರನೇ ಹಂತದ ಪ್ರಯೋಗ ನಡೆಯುತ್ತಿದ್ದು, ಮಧ್ಯಂತರ ವಿಶ್ಲೇಷಣಾ ವರದಿಯನ್ನು ಸರ್ಕಾರಿ ಒಡೆತನದ ಡಬ್ಲ್ಯೂಎಎಂ ನ್ಯೂಸ್ ಏಜೆನ್ಸಿಯಲ್ಲಿ ಅಧಿಕೃತವಾಗಿ ಯುಎಇ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಇದನ್ನೂ ಓದಿ:ಭಾರತ್ ಬಯೋಟೆಕ್‌ನಲ್ಲಿ ಕೊವ್ಯಾಕ್ಸಿನ್ ಬಗ್ಗೆ ವಿದೇಶಿ ರಾಯಭಾರಿಗಳಿಗೆ ಮಾಹಿತಿ
ಆದರೆ ಯುಎಇಯಲ್ಲಿ ನಡೆದ ಪ್ರಯೋಗಗಳನ್ನು ಆಧರಿಸಿ ಈ ಅಭಿಪ್ರಾಯ ನೀಡಲಾಗಿದೆಯೋ ಅಥವಾ ಚೀನಾ ಸೇರಿ ವಿವಿಧ ದೇಶಗಳಲ್ಲಿ ನಡೆದ ಪ್ರಯೋಗಗಳನ್ನೂ ಕೂಡ ಗಣನೆಗೆ ತೆಗೆದುಕೊಳ್ಳಲಾಗಿದೆಯೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಸರ್ಕಾರ ಹೇಳಿದೆ.
ಯುಎಇಯಲ್ಲಿ ಈಗಾಗಲೇ ಉನ್ನತ ಅಧಿಕಾರಿಗಳು ಸೈನೋಫಾರ್ಮ್ ಲಸಿಕೆ ತೆಗೆದುಕೊಂಡಿದ್ದಾರೆ. ಅಲ್ಲಿನ ಮುಖ್ಯಸ್ಥ ಶೇಖ್ ಮೊಹಮದ್ ಬಿನ್ ಅಲ್ ಮಕ್ತೌಮ್ ಕೂಡ ಈ ಲಸಿಕೆ ಪಡೆದಿದ್ದಾರೆ.
ಇದೇ ಸೈನೋಫಾರ್ಮ್ ವ್ಯಾಕ್ಸಿನ್ ಅವಲಂಬಿಸಿರುವ ಮೊರಾಕೊ ದೇಶ ಈಗಾಗಲೇ ಲಸಿಕೆ ಹಾಕುವ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಿದ್ದು, ತನ್ನ ದೇಶದ ಶೇಕಡಾ 80ರಷ್ಟು ಯುವಕರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.