ಅಬುಧಾಬಿ(ಯುಎಇ): ಭಾರತದಲ್ಲಿ ಕೋವಿಡ್ ವೈರಸ್ ವಿಜೃಂಭಿಸುತ್ತಿರುವ ಬೆನ್ನಲ್ಲೇ ದೇಶದಿಂದ ತರೆಳುವ ವಿಮಾನಗಳ ಪ್ರವೇಶ ನಿರ್ಬಂಧ ಮಾಡುತ್ತಿರುವ ದೇಶಗಳ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಫ್ರಾನ್ಸ್, ಬ್ರಿಟನ್ ಭಾರತದಿಂದ ಬರುವ ವಿಮಾನಗಳನ್ನು ನಿಷೇಧಿಸಿವೆ. ಇವುಗಳ ಪಟ್ಟಿಗೆ ಯುಎಇ, ಆಸ್ಟ್ರೇಲಿಯಾ ಕೂಡ ಸೇರಿವೆ.
ದೇಶದಲ್ಲಿ ಕೊರೊನಾ ಮಹಾಮಾರಿ ಉಗ್ರ ಸ್ವರೂಪವನ್ನು ಪ್ರದರ್ಶಿಸುತ್ತಿರುವುದರಿಂದ ನೆರೆಯ ಯುಎಇ ಕೂಡ ಏಪ್ರಿಲ್ 24ರಿಂದ ಮುಂದಿನ 10 ದಿನಗಳ ಕಾಲ ಭಾರತದಿಂದ ಬರುವ ಎಲ್ಲಾ ರೀತಿಯ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ಅರಬ್ ಎಮಿರೇಟ್ಸ್ ಘೋಷಿಸಿದೆ. ಕಳೆದ 14 ದಿನಗಳಲ್ಲಿ ಭಾರತಕ್ಕೆ ಬಂದಿರುವ ಇತರೆ ದೇಶಗಳ ಪ್ರಜೆಗಳ ಪ್ರವೇಶವನ್ನೂ ರದ್ದು ಮಾಡಿದೆ. ಆದರೆ ದುಬೈನಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟ ಮುಂದುವರಿಯಲಿದೆ ಎಂದು ಹೇಳಿದೆ.
ಆಸ್ಟ್ರೇಲಿಯಾದಿಂದಲೂ ವಿಮಾನ ಪ್ರವೇಶಕ್ಕೆ ನಿರ್ಬಂಧ
ಭಾರತ ಸೇರಿದಂತೆ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ದೇಶಗಳಿಂದ ಬರುವ ವಿಮಾನಗಳು ಆಸ್ಟ್ರೇಲಿಯಾಗೆ ಬರುವುದನ್ನು ಕಡಿಮೆ ಮಾಡಿದ್ದೇವೆ ಎಂದು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಘೋಷಿಸಿದ್ದಾರೆ. ಈ ದೇಶಗಳಿಂದ ಶೇಕಡಾ 30 ರಷ್ಟು ವಿಮಾನಗಳಿಗೆ ಪ್ರವೇಶವನ್ನು ರದ್ದು ಮಾಡಲು ಕ್ಯಾಬಿನೆಟ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಠಿಣ ಸವಾಲುಗಳ ಮಧ್ಯೆ ಭಾರತವು ಶುದ್ಧ ಎನರ್ಜಿಯ ದಿಟ್ಟ ನಿರ್ಧಾರ ತೆಗೆದುಕೊಂಡಿದೆ: ಪ್ರಧಾನಿ ಮೋದಿ
ಈಗಾಗಲೇ ಕೋವಿಡ್ ಸೋಂಕು ಹೆಚ್ಚಿರುವ ದೇಶಗಳಿಂದ ಬರುವ ಆಸ್ಟ್ರೇಲಿಯಾದ ಪ್ರಜೆಗಳು ವಿಮಾನ ಹತ್ತುವ 72 ಗಂಟೆಗಳಿಗೂ ಮೊದಲು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರಬೇಕು. ಅದನ್ನು ಸಂಬಂಧಿತ ಸಿಬ್ಬಂದಿಗೆ ತೋರಿಸಬೇಕೆಂತಲೂ ಸೂಚಿಸಿದ್ದಾರೆ. ಬ್ರಿಟನ್ ಭಾರತವನ್ನು ಕೆಂಪು ಪಟ್ಟಿಯಲ್ಲಿ ಇಟ್ಟಿದೆ. ಇಲ್ಲಿಂದು ಹೊರಡುವ ವಿಮಾನಗಳಿಗೆ ತಾತ್ಕಾಲಿಕವಾಗಿ ನಿಷೇಧ ವಿಧಿಸಿದೆ. ಭಾರತದಿಂದ 8 ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಬೇಕೆಂದು 4 ವಿಮಾನ ಸಂಸ್ಥೆಗಳು ಮಾಡಿದ ಮನವಿಯನ್ನು ಬ್ರಿಟನ್ ತಳ್ಳಿಹಾಕಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರು ಗುಂಪು ಗುಂಪಾಗಿ ಸೇರುತ್ತಾರೆ, ಪಾಸ್‌ಪೋರ್ಟ್ ಕೇಂದ್ರಗಳ ಬಳಿ ಅಂತರ ಕಾಪಾಡಿಕೊಂಡಿಲ್ಲ ಎಂಬ ಕಾರಣ ನೀಡಿದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.