ಇಸ್ತಾಂಬುಲ್:ಟರ್ಕಿಯಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಟರ್ಕಿಯ ಇಜ್ಮಿರ್ ಪ್ರಾಂತ್ಯದ ಬೇರಕ್ಲಿಯಲ್ಲಿ ಕಟ್ಟಡ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇಂದು ಬೆಳಗ್ಗೆ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದೆ.
ಭೂಕಂಪದಿಂದಾಗಿ ಇಜ್ಮಿರ್ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಇಸ್ತಾಂಬುಲ್ ಮೂಲದ ಕಂಡಿಲ್ಲಿ ಅಬ್ಸರ್ವೇಟರಿ ಮತ್ತು ಭೂಕಂಪ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಲುಕ್ ಒಜೆನರ್ ಹೇಳಿದ್ದಾರೆ.
ಟರ್ಕಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ ಈ ಬಗ್ಗೆ ಮಾಹಿತಿ ನೀಡಿದ ಇಜ್ಮಿರ್ ಗವರ್ನರ್, ಯಾವುಜ್ ಸೆಲಿಮ್ ಕೊಸ್ಗರ್, ಹಾನಿಗೊಳಗಾದ ಕಟ್ಟಡಗಳಿಂದ ಕನಿಷ್ಠ 70 ಮಂದಿಯನ್ನು ರಕ್ಷಿಸಲಾಗಿದೆ. ನಾಲ್ಕು ಕಟ್ಟಡಗಳು ನಾಶವಾಗಿದ್ದು, 10ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿವೆ. ಇತರೆ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ ಎಂದರು. ಆದರೆ ನಿಖರವಾದ ಸಂಖ್ಯೆಯನ್ನು ನೀಡಲಿಲ್ಲ.
ಕನಿಷ್ಠ 17 ಕಟ್ಟಡಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಟರ್ಕಿ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.