ರಿಯಾದ್:ಪ್ರಧಾನಿ ಮೋದಿ ಅವರು ಸೌದಿ ದೊರೆ ಹಾಗೂ ಯುವ ರಾಜನೊಂದಿಗೆ ಉಭಯ ರಾಷ್ಟ್ರಗಳ ಸ್ನೇಹ- ಸಂಬಂಧ ವೃದ್ಧಿಯ ಹಲವು ವಿಷಯಗಳನ್ನು ಚರ್ಚಿಸಿ ಮಂಗಳವಾರ ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ, ಈ ಮಹತ್ವದ ಮಾತುಕತೆಯಲ್ಲಿ ಅಪ್ಪಿ- ತಪ್ಪಿಯೂ ಕಾಶ್ಮೀರ ವಿಷಯದ ಕುರಿತು ಚರ್ಚೆಗೆ ಬಂದಿಲ್ಲ.
'ಇದೊಂದು ಭಾರತದ ಆಂತರಿಕ ವಿಷಯವಾಗಿದ್ದು, ಅದರ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸೌದಿಯ ಮೌನದಿಂದಲೇ ಗೊತ್ತಾಗುತ್ತಿದೆ' ಎಂದು ಭಾರತೀಯ ಅಧಿಕಾರಿಗಳ ವಿಶ್ಲೇಷಿಸಿದ್ದಾರೆ.
ಭಾರತದ ವಿದೇಶಾಂಗ ಧೋರಣೆ ಹಾಗೂ ಅದರ ದೇಶಿಯ ನೀತಿಗಳ ವಾಸ್ತವತೆಯನ್ನು ಅರ್ಥ ಮಾಡಿಕೊಂಡಿರುವ ಸೌದಿ, ಮಾತುಕತೆಯ ವೇಳೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಹಾಗೂ ಅಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಮೌನವಾಗಿದೆ. ಇದು ಎರಡೂ ದೇಶಗಳ ನಡುವಣ ಬಾಂಧವ್ಯ ಹಾಗೂ ಭಾರತದ ಸಾರ್ವಭೌಮ್ಯತೆಯನ್ನು ಅದು ಅರ್ಥೈಸಿಕೊಂಡಿದೆ ಎಂದು ಭಾರತೀಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಮಾತುಕತೆ ಬಳಿಕ ಜಂಟಿ ಹೇಳಿಕೆ ನೀಡಿರುವ ಉಭಯ ರಾಷ್ಟ್ರಗಳ ನಾಯಕರು, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವುದಾಗಿ ಘೋಷಣೆ ಮಾಡಿದ್ದಾರೆ. ಸಾರ್ವಭೌಮ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಯಾವುದೇ ವಿಧದ ಹಸ್ತಕ್ಷೇಪಕ್ಕೆ ಎರಡೂ ರಾಷ್ಟ್ರಗಳು ವಿರೋಧ ಇದೆ ಎಂದು ಹೇಳಿದ್ದಾರೆ. ಇನ್ನು ದಾವೋಸ್ ಇನ್ ದಿ ಡೆಸರ್ಟ್ನಲ್ಲಿ ನಡೆದ ಪ್ಯೂಚರ್ ಇನ್ವೆಸ್ಟ್ಮೆಂಟ್ ಇನಿಷಿಯೇಟಿವ್ ಫೋರಂನಲ್ಲಿ ಮೋದಿ ಅವರೇ ಪ್ರಮುಖ ಭಾಷಣಕಾರರಾಗಿದ್ದರು.
ತೈಲ ಸಮೃದ್ಧಿಯ ಸೌದಿ ಇಂಧನ ಆಧಾರಿತ ಮಾರುಕಟ್ಟೆಯ ಆರ್ಥಿಕತೆಯನ್ನು ನಂಬಿಕೊಂಡಿದೆ. ಕಳೆದ ದಶಕದಿಂದ ಪ್ರವಾಸಿ ಸ್ನೇಹಿ ರಾಷ್ಟ್ರವಾಗಿ ಬದಲಾಗುತ್ತಿದೆ. ಎರಡೂ ರಾಷ್ಟ್ರಗಳು ಕೊಟ್ಟು- ಖರೀದಿಸುವ ವ್ಯಾಪಾರದ ಬಾಂಧವ್ಯ ವೃದ್ಧಿಗೆ ಮುನ್ನಡಿ ಇಟ್ಟಿವೆ. ಉಭಯ ದೇಶಗಳು ಈಗ ವಾಣಿಜ್ಯಾತ್ಮಕ ವ್ಯವಹಾರ ಅಷ್ಟೇ ಅಲ್ಲ ರಕ್ಷಣೆ ಹಾಗೂ ರಕ್ಷಣಾ ಸಂಬಂಧಿತ ಉದ್ಯಮಗಳಲ್ಲೂ ಪರಸ್ಪರ ಸಹಕಾರ ನೀಡಲು ಮುಂದೆ ಬಂದಿವೆ. ಇದಕ್ಕಾಗಿ ಯುದ್ಧ ಕಾರ್ಯತಂತ್ರ ಸಮಿತಿ ರಚನೆ ಮಾಡಿಕೊಂಡಿವೆ. ಈ ವರ್ಷದ ಫೆಬ್ರವರಿಯಲ್ಲಿ ಸೌದಿ ದೊರೆ ನವದೆಹಲಿಗೆ ಭೇಟಿ ನೀಡಿದ್ದಾಗ ಈ ಪ್ರಸ್ತಾವ ಮುಂದಿಟ್ಟಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ.