ಗಾಜಾ (ಪ್ಯಾಲೆಸ್ತೀನ್):ಇಸ್ರೇಲ್‌ನ ಫಿರಂಗಿದಳ ಭಾರಿ ಗುಂಡಿನ ದಾಳಿ ನಡೆಸಿದ್ದರಿಂದ ಬೆದರಿದ ಪ್ಯಾಲೆಸ್ತೀನಿಯನ್ಕುಟುಂಬಗಳು ತಮ್ಮ ಮಕ್ಕಳು ಮತ್ತು ವಸ್ತುಗಳೊಂದಿಗೆ ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ.
ಇಸ್ರೇಲ್‌ನ ಉತ್ತರ ಮತ್ತು ಪೂರ್ವ ಗಡಿಗಳ ಸಮೀಪವಿರುವ ಗಾಜಾ ನಗರದ ಹೊರಗೆ ವಾಸಿಸುತ್ತಿದ್ದ ಪ್ಯಾಲೆಸ್ತೀನಿಯನ್ಕುಟುಂಬಗಳು ತೀವ್ರ ಫಿರಂಗಿ ಬಾಂಬ್ ಸ್ಫೋಟದಿಂದ ಪರಾರಿಯಾಗಿದ್ದಾರೆ. ಪಿಕ್ - ಅಪ್ ಟ್ರಕ್‌ಗಳಲ್ಲಿ, ಕತ್ತೆಗಳ ಮೇಲೆ ಮತ್ತು ಕಾಲ್ನಡಿಗೆಯಲ್ಲಿ ಕುಟುಂಬಗಳು ಬೇರೆಡೆ ಆಶ್ರಯ ಪಡೆಯಲು ತೆರಳುತ್ತಿದ್ದಾರೆ.
ಗಾಜಾ ಪ್ರದೇಶವನ್ನು ನಿಯಂತ್ರಿಸುವ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್‌ನೊಂದಿಗೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಇಸ್ರೇಲ್ ಗಡಿಯಲ್ಲಿ ಸೈನ್ಯ ಒಟ್ಟುಗೂಡಿಸಿದೆ. ಪ್ಯಾಲೆಸ್ತೀನಿಯನ್ ಉಗ್ರರು ಸುಮಾರು 1,800 ರಾಕೆಟ್‌ಗಳನ್ನು ಹಾರಿಸಿದ್ದಾರೆ ಮತ್ತು ಇಸ್ರೇಲಿ ಮಿಲಿಟರಿ 600ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ.
ಕದನ ವಿರಾಮ ತರುವಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳ ಹೊರತಾಗಿಯೂ ಇಸ್ರೇಲ್ ಮತ್ತು ಹಮಾಸ್ ಸಂಪೂರ್ಣ ಯುದ್ಧಕ್ಕೆ ಹತ್ತಿರವಾಗುತ್ತಿದೆ. ಇಸ್ರೇಲ್‌ನಲ್ಲಿ ಕೋಮು ಹಿಂಸಾಚಾರವು ನಾಲ್ಕನೇ ದಿನವೂ ಮುಂದುವರಿದಿದ್ದು, ಇಸ್ರೇಲ್ ಹೆಚ್ಚುವರಿ ಭದ್ರತಾ ಪಡೆಗಳನ್ನು ಕಳುಹಿಸಿದ ನಂತರವೂ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪುಗಳು ಘರ್ಷಣೆ ಮುಂದುವರಿಸಿವೆ.
31 ಮಕ್ಕಳು ಮತ್ತು 19 ಮಹಿಳೆಯರು ಸೇರಿದಂತೆ 830 ಮಂದಿ ಗಾಯಗೊಂಡು 119 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪುಗಳು ತಮ್ಮ ಗುಂಪಿನಲ್ಲಿ 20 ಸಾವುಗಳಾಗಿರುವುದಾಗಿ ದೃಢಪಡಿಸಿವೆ. ಆದರೆ ಇಸ್ರೇಲ್ ಈ ಸಂಖ್ಯೆ ಹೆಚ್ಚಿದೆ ಎಂದು ಹೇಳಿದೆ. ಇಸ್ರೇಲ್‌ನಲ್ಲಿ 6 ವರ್ಷದ ಬಾಲಕ ಮತ್ತು ಸೈನಿಕ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.