ಇಸ್ರೇಲ್: ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿರುವ ಜಗತ್ತಿನ ಹಲವು ದೇಶಗಳಿಗೆ ಭಾರತ ಆಪ್ತರಕ್ಷಕನಾಗಿ ಸಹಾಯ ಮಾಡುತ್ತಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧನ್ನು ಅವಶ್ಯವಿರುವ ಇತರೆ ದೇಶಗಳಿಗೆ ಕಳುಹಿಸಿಕೊಡುವ ಮೂಲಕ ಮಾನವೀಯ ಕಾರ್ಯದಲ್ಲಿ ನಿರತವಾಗಿದೆ.
ಅಮೆರಿಕಗೆಈ ಔಷಧಿ ಕಳುಹಿಸಿ ಟ್ರಂಪ್ ಕಡೆಯಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಪ್ರಧಾನಿ ಮೋದಿ ಅವರಿಗೆ ಇದೀಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅಭಿನಂದಿಸಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ ಹೆಚ್ಚಿನ ಪ್ರಮಾಣದಲ್ಲಿ ಇಸ್ರೇಲ್ಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಪೂರೈಸಿದ್ದಕ್ಕಾಗಿ ನಮಗೆ ಅನುಕೂಲವಾಗಿದೆ. ಥ್ಯಾಂಕ್ಯೂ ಮೈ ಡಿಯರ್ ಫ್ರೆಂಡ್ ಎಂದು ಟ್ವೀಟ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸೋಣ. ಮಿತ್ರ ರಾಷ್ಟ್ರಗಳ ಸಹಾಯಕ್ಕಾಗಿ ಭಾರತ ಸದಾ ಸಿದ್ಧ. ಇಸ್ರೇಲ್ ಜನರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, ಹೈಡ್ರಾಕ್ಸಿಕ್ಲೋರೋಕ್ವಿನ್ ಕಳುಹಿಸಿಕೊಟ್ಟ ಭಾರತಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯ ನಾಯಕತ್ವ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ ಮಾತ್ರವಲ್ಲ, ಇಡೀ ಮಾನವತೆಗೆ ನೆರವಾಗುತ್ತಿದೆ ಎಂದು ಟ್ರಂಪ್ ಗುಣಗಾನ ಮಾಡಿದ್ದರು.