ಟೆಲ್ ಅವೀವ್ (ಇಸ್ರೇಲ್): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಫಿಜರ್-ಬಯಾಂಟೆಕ್ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಪ್ರಧಾನಿಗೆ ಆರೋಗ್ಯ ಸಚಿವ ಯೂಲಿ ಎಡೆಲಸ್ಟೈನ್ ಸಾಥ್ ನೀಡಿದ್ದಾರೆ.
"ರಿಟರ್ನಿಂಗ್ ಟು ಲೈಫ್" ಅಭಿಯಾನದಡಿ ಎರಡನೇ ಡೋಸ್ ಪಡೆದುಕೊಂಡ ಪ್ರಧಾನಿ ನೆತನ್ಯಾಹು, "ಮುಂಬರುವ 2-3 ತಿಂಗಳಲ್ಲಿ ಎಲ್ಲಾ ಇಸ್ರೇಲಿ ನಾಗರಿಕರಿಗೂ ಲಸಿಕೆ ನೀಡಲಾಗುವುದು. ಇದು ನಮ್ಮ ಆರ್ಥಿಕತೆಯನ್ನು ಮತ್ತೆ ತೆರೆಯಲು ಸಾಧ್ಯವಾಗಿಸುತ್ತದೆ." ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಇಸ್ರೇಲ್‌ಗೆ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ನೀಡಲು ನಾನು ಫಿಜರ್‌ನೊಂದಿಗೆ ಮಾತುಕತೆ ನಡೆಸಿದ್ದೇನೆ. ಮಾರ್ಚ್ನಲ್ಲಿ ಎಲ್ಲ ಇಸ್ರೇಲಿ ನಾಗರಿಕರಿಗೆ ಲಸಿಕೆ ಹಾಕಲು ಅನುವು ಮಾಡಿ ಕೊಡಲಾಗುವುದು. ಆ ನಂತರದಲ್ಲಿ ನಾವು ನಮ್ಮ ಇಡೀ ಆರ್ಥಿಕತೆಯನ್ನು ತೆರೆದು ಮತ್ತೆ ಸರಿಯಾದ ಜೀವನಕ್ಕೆ ಮರಳಬಹುದು. ನಾವು ಒಟ್ಟಿಗೆ ಕೊರೊನಾ ಕಾಲಕ್ಕೆ ಪ್ರವೇಶಿಸಿದ್ದೇವೆ, ಅಂತೆಯೇ ಅದರಿಂದ ಒಟ್ಟಿಗೆ ಹೊರ ಬರಲಿದ್ದೇವೆ." ಎಂದು ಪಿಎಂ ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ವ್ಯಾಟಿಕನ್ನಲ್ಲಿ ಮುಂದಿನ ವಾರದಿಂದ ಕೋವಿಡ್ -19 ಲಸಿಕೆ ವಿತರಣೆ
ಡಿಸೆಂಬರ್ 20 ರಂದು ಬೆಂಜಮಿನ್ ನೆತನ್ಯಾಹು ಲಸಿಕೆ ಪಡೆದ ಮೊದಲ ಇಸ್ರೇಲಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಿಂಗಳ ಅಂತ್ಯದ ವೇಳೆಗೆ ಲಕ್ಷಾಂತರ ಡೋಸ್ಗಳು ಬರುತ್ತವೆ ಎಂದು ವಾಗ್ದಾನ ಮಾಡಿದ್ದರು. ಅಂತೆಯೇ ಎಲ್ಲಾ ಇಸ್ರೇಲಿಗರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.