ಅಂಕಾರಾ , ಟರ್ಕಿ:ಸೇನಾ ಹೆಲಿಕಾಪ್ಟರ್ ಪತನವಾಗಿ ಪೂರ್ವ ಟರ್ಕಿಯಲ್ಲಿ 11 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಮೃತಪಟ್ಟವರಲ್ಲಿ ಉನ್ನತ ಹಂತದ ಸೇನಾಧಿಕಾರಿಗಳೂ ಇದ್ದರೆಂದು ವರದಿಗಳು ತಿಳಿಸಿದ್ದು, ಕುರ್ದಿಷ್ ಸಮುದಾಯ ಹೆಚ್ಚಾಗಿರುವ ಬಿಟ್ಲಿಸ್ ಪ್ರಾಂತ್ಯದ ತತ್ವಾನ್ ನಗರದ ಸೆಕ್ಮೆಸ್ ಗ್ರಾಮದಲ್ಲಿ ಹೆಲಿಕಾಪ್ಟರ್ ಪತನವಾಗಿದೆ.
ಪತನವಾಗಿರುವ ಸೇನಾ ಹೆಲಿಕಾಪ್ಟರ್ ಬಿಂಗೋಲ್ನಿಂದ ತತ್ವಾನ್ಗೆ ಹಿಂದಿರುಗಬೇಕಾದರೆ ಗುರುವಾರ ಮಧ್ಯಾಹ್ನ 02.25ರ ವೇಳೆ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ. ಈ ವೇಳೆ ಹೆಲಿಕಾಪ್ಟರ್ ಪತನವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:'ಮಹಿಳಾ ಕಾರ್ಪೊರೇಟರ್ಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಕಾರ್ಪೋರೇಟರ್ ಬಂಧನ'
ಸೇನೆಯ ಕಾರ್ಪ್ಸ್ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಒಸ್ಮಾನ್ ಎರ್ಬಾಸ್ ಮೃತಪಟ್ಟಿದ್ದಾರೆ ಎಂದು ಟರ್ಕಿಯ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ದೆಲ್ವೆತ್ ಬೆಸೆಲಿ ಟ್ವೀಟ್ ಮಾಡಿದ್ದಾರೆ.
ಹೆಲಿಕಾಪ್ಟರ್ ಪತನವಾಗಿ 9 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದಿನಪತ್ರಿಕೆಯಾದ ಡೈಲಿ ಸಭಾಹ್ ವರದಿ ಮಾಡಿದೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣಗಳು ಏನು ಎಂಬುದನ್ನು ಅಲ್ಲಿನ ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ. ಪ್ರತಿಕೂಲ ಹವಾಮಾನವೇ ಹೆಲಿಕಾಪ್ಟರ್ ಪತನಕ್ಕೆ ಕಾರಣ ಎಂದು ಟರ್ಕಿಯ ಹಬರ್ಟರ್ಕ್ ವಾಹಿನಿ ವರದಿ ಮಾಡಿದೆ