ಟೆಹರಾನ್(ಇರಾನ್): ಅಪರಾಧಗಳು ಯಾವಾಗಲೂ ಕ್ರೂರವಾಗಿರುತ್ತವೆ. ಕೆಲವೊಮ್ಮೆ ಭೀಕರವಾಗಿರುತ್ತವೆ. ಈ ಅಪರಾಧಗಳಿಗೆ ಮತ್ತಷ್ಟು ವಿಕೃತಿ ಸೇರ್ಪಡೆಯಾದರೆ ಅದು ಅಮಾನವೀಯ ಎನಿಸಿಕೊಳ್ಳುತ್ತದೆ. ಮಧ್ಯಪ್ರಾಚ್ಯದ ರಾಷ್ಟ್ರ ಮತ್ತು ಶಿಯಾ ಮುಸ್ಲಿಮರ ಬಾಹುಳ್ಯದ ಇರಾನ್‌ನಲ್ಲಿ ಅಪರಾಧ ಮತ್ತು ವಿಕೃತಿ ಬೆರೆತ ಘಟನೆಯೊಂದು ನಡೆದಿದ್ದು, ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ.
ಹೌದು, ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರ ರೀತಿಯಲ್ಲಿ ಕೊಂದಿದ್ದಾನೆ. ಕುಪಿತ ವ್ಯಕ್ತಿ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಇರಾನ್‌ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ.
ಮೋನಾ ಹೈದರಿ (17) ಕೊಲೆಯಾದ ಯುವತಿ. ಈಕೆಯ ಪತಿ ಮತ್ತು ಸೋದರ ಮಾವ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಅಂಥ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.