ಜೆರುಸಲೆಮ್: ಇಲ್ಲಿನ ಯಾವ್ನೇ ಬಳಿ ಇತ್ತೀಚಿಗೆ ಪುರಾತನ ಇಸ್ಲಾಮಿಕ್ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಸುಮಾರು 1,100 ವರ್ಷಗಳ ಹಿಂದಿನ ಅಬ್ಬಾಸಿಡ್ ಅವಧಿಗೆ ಸೇರಿದ 425 ಚಿನ್ನದ ನಾಣ್ಯಗಳು ದೊರೆತಿವೆ. ಇದು "ಅತ್ಯಂತ ಅಪರೂಪದ" ಸಂಶೋಧನೆಯಾಗಿದೆ ಎಂದು ಇಸ್ರೇಲ್ ಆಂಟಿಕ್ವಿಟೀಸ್ ಪ್ರಾಧಿಕಾರದ ಪುರಾತತ್ವ ಶಾಸ್ತ್ರಜ್ಞರಾದ ಲಿಯಾಟ್ ನಾಡವ್- ಜಿವ್ ಮತ್ತು ಎಲಿ ಹಡ್ಡಾದ್ ಜಂಟಿ ಹೇಳಿಕೆ ನೀಡಿದ್ದಾರೆ.
ಪುರಾತತ್ವ ಪ್ರಾಧಿಕಾರದ ನಾಣ್ಯ ತಜ್ಞ ರಾಬರ್ಟ್ ಕೂಲ್, "ಆರಂಭಿಕ ವಿಶ್ಲೇಷಣೆಯು 9ನೇ ಶತಮಾನದ ಉತ್ತರಾರ್ಧದಿಂದ ನಾಣ್ಯಗಳ ದಿನಾಂಕವನ್ನು ಸೂಚಿಸುತ್ತದೆ. ಇದನ್ನು ಅಬ್ಬಾಸಿಡ್ ಕ್ಯಾಲಿಫೇಟ್ನ ಸುವರ್ಣಯುಗವೆಂದು ಪರಿಗಣಿಸಲಾಗಿದೆ. ಇದು ಪೂರ್ವ ಮತ್ತು ಉತ್ತರ ಆಫ್ರಿಕಾದ ಹೆಚ್ಚಿನ ಭಾಗದಲ್ಲಿ ಚಾಲ್ತಿಯಲ್ಲಿತ್ತು" ಎಂದು ಹೇಳಿದ್ದಾರೆ.
ಈ ಆವಿಷ್ಕಾರ ಇಸ್ರೇಲ್ನಲ್ಲಿ ಕಂಡುಬರುವ ಪ್ರಾಚೀನ ನಾಣ್ಯಗಳ ಅತಿ ದೊಡ್ಡ ಸಂಗ್ರಹಗಳಲ್ಲಿ ಒಂದಾಗಿದೆ. 2015ರಲ್ಲಿ ಕೆಲ ಯುವಕರು 10 ಮತ್ತು 11ನೇ ಶತಮಾನಗಳಲ್ಲಿ ಫಾತಿಮಿಡ್ ಅವಧಿಯ ಪ್ರಾಚೀನ ಬಂದರು ನಗರವಾದ ಸಿಸೇರಿಯಾದ ಕರಾವಳಿಯಲ್ಲಿ ಸುಮಾರು 2,000 ಚಿನ್ನದ ನಾಣ್ಯಗಳನ್ನು ಪತ್ತೆ ಹಚ್ಚಿದ್ದರು.