ಗಾಜಾಪಟ್ಟಿ: ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಜಾ ಪ್ರದೇಶದಾದ್ಯಂತ 6 ಮಂದಿ ಸಾವನ್ನಪ್ಪಿದ್ದಾರೆ. ಕದನ ವಿರಾಮಕ್ಕಾಗಿ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಹೊರತಾಗಿಯೂ, ಪ್ಯಾಲೇಸ್ಟಿನಿಯನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇದೆ. ಇನ್ನು ಹಮಾಸ್ನಿಂದ ನಡೆಯುತ್ತಿರುವ ದಾಳಿಯನ್ನು ತಡೆಯುವ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದೆ ಎಂದು ಮಿಲಿಟರಿ ಹೇಳಿದೆ.
ಇನ್ನು ಇಲ್ಲಿನ ಕಟ್ಟಡ ಮೇಲೆ ದಾಳಿ ನಡೆಸುವ 5 ನಿಮಿಷದ ಮೊದಲು ಎಚ್ಚರಿಕೆ ಕರೆಯನ್ನು ಇಸ್ರೇಲ್ ಮಿಲಿಟರಿ ಪಡೆ ಕಳುಹಿಸಿದೆ ಎಂದು ಅಲ್ಲಿನ ಮಿಲಿಟರಿ ತಿಳಿಸಿದೆ.
ಇನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಅಹ್ಮದ್ ಅಲ್-ಆಸ್ಟಲ್ ವೈಮಾನಿಕ ದಾಳಿಯ ದೃಶ್ಯವನ್ನು ವಿವರಿಸಿದ್ದು, "ಎಚ್ಚರಿಕೆ ಕರೆ ಬಂದ ತಕ್ಷಣವೇ ಜನರು ಭಯದಿಂದ ಕಟ್ಟಡದಿಂದ ಹೊರಗಡೆ ಓಡಿದ್ದಾರೆ. ನಾವು ಬೀದಿಗೆ ಬಂದಿದ್ದೇವೆ. ವಿನಾಶಕಾರಿ ಬಾಂಬ್ ಸ್ಫೋಟ ಬಂದಾಗ ಉಸಿರು ನಿಂತಂತೆ ಭಾಸವಾಯಿತು. ಮಕ್ಕಳ ಆಕ್ರಂದನ ಬೀದಿ ಉದ್ದಕ್ಕೂ ಕೇಳಿಸುತ್ತಿತ್ತು. ನಮಗೆ ಸಹಾಯ ಮಾಡಲು ಯಾರೂ ಇಲ್ಲ. ನಮಗೆ ಸಹಾಯ ಮಾಡಲು ನಾವು ದೇವರನ್ನು ಪ್ರಾರ್ಥಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಇಸ್ರೇಲಿ ಮಿಲಿಟರಿ ಪಡೆ ಯೂನಿಸ್ ಮತ್ತು ರಫಾ ಪಟ್ಟಣಗಳ ಸುತ್ತಲೂ ಇರುವ ಹಮಾಸ್ ಉಗ್ರಗಾಮಿ ಸುರಂಗ ಜಾಲದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ. ಈ ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಅಕ್ಸಾ ರೇಡಿಯೋದ ವರದಿಗಾರರೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.