ಜೆರುಸಲೇಂ(ಇಸ್ರೇಲ್):ಕೋವಿಡ್-19 ಹೊಸ ರೂಪಾಂತರಿ ಒಮಿಕ್ರೋನ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿದೇಶಿ ಪ್ರಜೆಗಳ ಪ್ರವೇಶವನ್ನು ನಿಷೇಧಿಸಲು ಇಸ್ರೇಲ್ ಸರ್ಕಾರ ನಿರ್ಧರಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರುವ ಬಗ್ಗೆ ತಡರಾತ್ರಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಮುಂದಿನ 14 ದಿನಗಳವರೆಗೆ ವಿದೇಶಿಯರಿಗೆ ಇಸ್ರೇಲ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆಯಲ್ಲಿ ತಿಳಿಸಿದರು. ದೇಶದಲ್ಲಿ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರೋನ್ ರೂಪಾಂತರಿಯ ಒಂದು ಪ್ರಕರಣ ಪತ್ತೆಯಾಗಿದೆ. 50 ಆಫ್ರಿಕನ್ ರಾಷ್ಟ್ರಗಳನ್ನು ರೆಡ್ ಅಲರ್ಟ್ ಝೋನ್ ಎಂದು ಘೋಷಿಸಲಾಗಿದೆ. ಆ ದೇಶಗಳಿಗೆ ಇಸ್ರೇಲ್ ಪ್ರಜೆಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ, ಆಫ್ರಿಕಾದಿಂದ ಬರುವ ಇಸ್ರೇಲ್ ಪ್ರಜೆಗಳು ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
'ಕ್ವಾರಂಟೈನ್ ಕೇಂದ್ರಗಳನ್ನು ಮತ್ತೆ ತೆರೆಯಲಾಗುವುದು. ನಾವು ಪ್ರಸ್ತುತ ಅನಿಶ್ಚಿತತೆಯ ಅವಧಿಯಲ್ಲಿದ್ದೇವೆ' ಎಂದು ನಫ್ತಾಲಿ ಬೆನೆಟ್ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ದಾರೆ. ಪತ್ತೆಯಾದ ಓಮಿಕ್ರಾನ್ ಹೊಸ ತಳಿ ಹಿಂದಿನವುಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತಿದೆ. ಒಮಿಕ್ರೋನ್ ವಿರುದ್ಧ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಫ್ರಿಕಾದಲ್ಲಿ ಈ ರೂಪಾಂತರಿ ಮೊದಲು ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯೂ ಕಳವಳಿಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಮಾರ್ಚ್ 2020ರಿಂದ ಇಸ್ರೇಲ್ನಲ್ಲಿ 8,100ಕ್ಕೂ ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 7,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇಸ್ರೇಲ್‌ನ 9.4 ಮಿಲಿಯನ್ ಜನಸಂಖ್ಯೆಯ ಸುಮಾರು 57 ಪ್ರತಿ ಶತದಷ್ಟು ಜನರು ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದಿದ್ದಾರೆ.
ಇದನ್ನೂ ಓದಿ:ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ