ಕರ್ನಾಟಕ

karnataka

ETV Bharat / international

ವಿಶೇಷ ಲೇಖನ: ಯುಎಇ-ಇಸ್ರೇಲ್​ ಶತಮಾನದ ಶಾಂತಿ ಒಪ್ಪಂದ...ಒಳ ತಿರುಳುಗಳು - ಫಿಫಾ ಫುಟ್ಬಾಲ್ ವಿಶ್ವಕಪ್

ಭಾರತದ ಮಟ್ಟಿಗೆ ಹೇಳುವುದಾದರೆ ಇದೊಂದು ಉತ್ತಮ ಬೆಳವಣಿಗೆ. ಇನ್ನುಮುಂದೆ ಭಾರತ ಇಸ್ರೇಲ್ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಅರಬ್ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾದ ಅಗತ್ಯವಿಲ್ಲ. ಇಸ್ರೇಲ್ ಜೊತೆಗಿನ ಒಪ್ಪಂದಗಳನ್ನು ಜೊತೆ ಜೊತೆಯಾಗಿಯೇ ನಾವು ಮುಂದಕ್ಕೆ ಕೊಂಡೊಯ್ಯಬಹುದು.

Fwd: Israel UAE accord: The deal of the century
ವಿಶೇಷ ಲೇಖನ: ಯುಎಇ-ಇಸ್ರೇಲ್​ ಶತಮಾನದ ಶಾಂತಿ ಒಪ್ಪಂದ...ಒಳ ತಿರುಳುಗಳು

By

Published : Aug 18, 2020, 2:04 PM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 13ರಂದು ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಒಪ್ಪಂದವನ್ನು ಘೋಷಿಸಿದರು. 'ಐತಿಹಾಸಿಕ' ಎಂದು ಕರೆಯಲ್ಪಟ್ಟ ಸಭೆಯ ನಂತರ 'ಶತಮಾನದ ಒಪ್ಪಂದ' ಎಂದೇ ಬಣ್ಣಿಸಿ, ಬಿಡುಗಡೆ ಮಾಡಲಾದ ಈ ಜಂಟಿ ಹೇಳಿಕೆಯ ಪ್ರಕಾರ ಇಸ್ರೇಲ್ ಈ ಭಾಗದಲ್ಲಿ ಶಾಂತಿ ಮರುಸ್ಥಾಪನೆಗೆ, ಶಾಂತಿ ದೃಷ್ಟಿಯಿಂದ ವಿವರಿಸಲಾದ ಪ್ರದೇಶಗಳ ಮೇಲೆ ತನ್ನ ಸಾರ್ವಭೌಮತ್ವದ ಘೋಷಣೆಯನ್ನು ಸ್ಥಗಿತಗೊಳಿಸಿದೆ.

ಉಭಯ ದೇಶಗಳೂ ಪರಸ್ಪರ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಒಪ್ಪಿಕೊಂಡಿವೆ. ಕೋವಿಡ್-19 ಹತೋಟಿಗೆ ಲಸಿಕೆ ಅಭಿವೃದ್ಧಿಗೆ ಉಭಯ ದೇಶಗಳು ಪರಸ್ಪರ ಸಹಕಾರಕ್ಕೆ ನಿರ್ಧರಿಸಿವೆ. ಇದರ ಜೊತೆಗೆ ಮುಸ್ಲಿಂ ಯಾತ್ರಾರ್ಥಿಗಳಿಗೆ ಧಾರ್ಮಿಕ ಉದ್ದೇಶಗಳಿಗಾಗಿ ಅವರ ಪವಿತ್ರ ಯಾತ್ರಾ ಸ್ಥಳಗಳಾದ ಜೆರುಸಲೆಮ್ ಮತ್ತು ಅಲ್-ಅಕ್ಸಾ ಮಸೀದಿಗೆ ಭೇಟಿ ನೀಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಇದರ ಜೊತೆಗೆ ಮಧ್ಯಪ್ರಾಚ್ಯದ ವಿಷಯಕ್ಕೆ ಸಂಬಂಧಿಸಿ, ಜಂಟಿ ಕಾರ್ಯತಂತ್ರ ರೂಪಿಸಿ ಕೆಲಸ ಮಾಡಲು ಯುಎಸ್​ಎ ಹಾಗೂ ಯುಎಇ ಒಪ್ಪಿಕೊಂಡಿವೆ. ಈ ಒಪ್ಪಂದವನ್ನು ಕುದುರಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಇಸ್ರೇಲ್​​ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುಎಇಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್-ನಹ್ಯಾನ್ ನಡುವೆ ಸಭೆ ನಡೆಸಿ ಈ ಒಪ್ಪಂದಕ್ಕೆ ಭೂಮಿಕೆ ಸಿದ್ಧಪಡಿಸಿದ್ದರು. ಬಳಿಕ ಉಭಯ ದೇಶಗಳು ಈ ಮಾತುಕತೆಯನ್ನು ಮುಂದುವರೆಸಿದ್ದವು. ಜನವರಿ 28ರಂದು ಅಧ್ಯಕ್ಷೀಯ ನಿವಾಸ ಶ್ವೇತಭವನದಲ್ಲಿ ಟ್ರಂಪ್ ತನ್ನ ಶಾಂತಿ ಪ್ರಣಾಳಿಕೆಯನ್ನು ಪ್ರಸ್ತುತ ಪಡಿಸಿದ್ದರು.

ಈ ಒಪ್ಪಂದದ ಪ್ರಕಾರ, ಮುಂದಿನ ಮೂರು ವಾರಗಳಲ್ಲಿ, ಹೂಡಿಕೆ, ಪ್ರವಾಸೋದ್ಯಮ, ಭದ್ರತೆ, ವಾಯುಯಾನ, ಇಂಧನ, ಆರೋಗ್ಯ ರಕ್ಷಣೆ, ಸಾಂಸ್ಕೃತಿಕ ವಿನಿಮಯ, ಪರಿಸರ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ, ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಉಭಯ ದೇಶಗಳು ಸಭೆ ಸೇರಲಿವೆ. ಈ ಒಪ್ಪಂದದ ಹೊರತಾಗಿಯೂ ಪ್ಯಾಲೆಸ್ಟೈನ್ ಜೊತೆಗಿನ ವಿವಾದಗಳು ಶಮನವಾಗುವರೆಗೆ ಇಸ್ರೇಲ್ ಅದರ ರಾಜಧಾನಿ ಜೆರುಸಲೇಮ್​​ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಸ್ಥಾಪಿಸುವುದಿಲ್ಲ ಎಂದು ಯುಎಇ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ ಪಶ್ಚಿಮ ದಂಡೆಯಲ್ಲಿ ತಮ್ಮ ವಿಸ್ತರಣಾ ಯೋಜನೆಯನ್ನು ಸದ್ಯಕ್ಕೆ 'ವಿಳಂಬಗೊಳಿಸಲು' ಮಾತ್ರ ಒಪ್ಪಿಕೊಂಡಿರುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳಲ್ಲೂ ಈ ಒಪ್ಪಂದಕ್ಕೆ ಎದುರಾಗಬಹುದಾದ ಟೀಕೆಗಳನ್ನು ತಗ್ಗಿಸಲು ಉಭಯ ದೇಶಗಳೂ ಈ ತೆರನಾದ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ ಎಂದು ಅಭಿಪ್ರಾಯ ಪಡಲಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿರುವ ಬೆಳವಣಿಗೆಗಳು, ಅಲ್ಲಿನ ದೇಶಗಳು ಇಸ್ರೇಲ್ ಬಗ್ಗೆಗಿನ ಮೃದು ನೀತಿ ಅನುಸರಿಸುತ್ತಿವೆ ಎಂಬ ಸೂಚನೆ ನೀಡುತ್ತಿವೆ. ಕಳೆದ ವರ್ಷ ಒಮಾನ್‌ಗೆ ನೆತನ್ಯಾಹು ಭೇಟಿ ನೀಡಿದಾಗ ತಮ್ಮ ಸಾಮಾನ್ಯ ಶತ್ರು ದೇಶ ಇರಾನ್​​ ಪ್ರಭಾವ ತಗ್ಗಿಸುವ ಸಲುವಾಗಿ ಅದರ ವಿರುದ್ಧ ಇಸ್ರೇಲ್ ಜೊತೆಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಯುಎಇ ನಿರ್ಧಾರ ಮಾಡಿತ್ತು.

ಫಿಫಾ ಫುಟ್ಬಾಲ್ ವಿಶ್ವಕಪ್ ತಯಾರಿ ಭಾಗವಾಗಿ ಇಸ್ರೇಲ್ ಜೊತೆಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳಲು ಕತಾರ್ ನಿರ್ಧಾರ, ಪ್ಯಾಲೆಸ್ಟೇನ್​​​​ಗೆ ಗರಿಷ್ಠ ನೆರವು ನೀಡಿ, ಈಗ ಬಸವಳಿದಿರುವ ರಾಷ್ಟ್ರಗಳು ಸಹ ರಾಷ್ಟ್ರವಾಗಿ ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಸೌದಿ ಕ್ರೌನ್ ಪ್ರಿನ್ಸ್ ಸಲ್ಮಾನ್ ನಿರ್ಧಾರ ಹಾಗೂ ಇಸ್ರೆಲ್​ನ ಉದ್ಯಮಿಗಳಿಗೆ ತನ್ನ ದೇಶಕ್ಕೆ ಭೇಟಿ ನೀಡಲು ಅನುಮತಿ, ಇವೆಲ್ಲದರ ಜೊತೆಗೆ ಇಸ್ರೇಲ್ ಮೇಲಣ ಸುದೀರ್ಘಕಾಲದ ಬಹಿಷ್ಕಾರದ ನಿರರ್ಥಕತೆಯ ಬಗ್ಗೆ ಮುಸ್ಲಿಂ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯ-ಇವೆಲ್ಲವೂ ಕೊಲ್ಲಿ ರಾಷ್ಟ್ರಗಳು ನಿಧಾನವಾಗಿ ಯಹೂದಿ ರಾಷ್ಟ್ರವಾದ ಇಸ್ರೇಲ್ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವಂತೆ ಮಾಡಿದೆ.

ಈ ಒಪ್ಪಂದಕ್ಕೆ ಇತರ ದೇಶಗಳ ಪ್ರತಿಕ್ರಿಯೆ ಬಹುತೇಕ ಅವುಗಳ ಚಾಲ್ತಿಯಲ್ಲಿರುವ ವಿದೇಶಾಂಗ ನೀತಿಗಳ ಪ್ರಕಾರವೇ ಇದೆ. ಈ ಒಪ್ಪಂದದಲ್ಲಿ ಭಾಗಿಯಾಗಿರುವ ಮೂರು ದೇಶಗಳು ಈ ಒಪ್ಪಂದದಿಂದ ತೃಪ್ತಿ ಪಟ್ಟಿದ್ದರೂ ಇಸ್ರೆಲ್​​​ನ ಬಲಪಂಥೀಯ ಗುಂಪುಗಳು ನೆತನ್ಯಾಹು ಅವರನ್ನು ಈ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಟೀಕಿಸಿವೆ. ತಮಗೆ ನೆತನ್ಯಾಹು ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಜಿಸಿಸಿ ರಾಷ್ಟ್ರಗಳಲ್ಲಿ ಅತಿದೊಡ್ಡ ದೇಶವಾದ ಸೌದಿ ಅರೇಬಿಯಾ ಇನ್ನೂ ಈ ಒಪ್ಪಂದಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಬಹುಶಃ ಇದು ಇತರ ಕೊಲ್ಲಿ ರಾಷ್ಟ್ರಗಳ ಸಂಬಂಧ ಪ್ರತಿಕ್ರಿಯೆಯನ್ನು ಕಾಯುತ್ತಿದೆ. ಆದಾಗ್ಯೂ ಯುಎಸ್ಎ ಮತ್ತು ಯುಎಇ ಜೊತೆಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿರುವ ಸೌದಿ ಈ ಒಪ್ಪಂದವನ್ನು ಖಂಡಿಸುವುದು ಹೆಚ್ಚು ಕಡಿಮೆ ಅಸಂಭವ.

ಕತಾರ್ ಮತ್ತು ಬಹ್ರೇನ್ ಈ ಒಪ್ಪಂದವನ್ನು ಸ್ವಾಗತಿಸಿವೆ. ಪ್ಯಾಲೆಸ್ಟೇನ್ ನ ಪ್ರಬಲ ಬೆಂಬಲಿಗ ದೇಶವಾದ ಕುವೈತ್ ಈ ಕಾರಣಕ್ಕೆ ತನ್ನ ನಿಲುವು ಪ್ರಕಟಿಸಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಓಮನ್ ಈ ಒಪ್ಪಂದವನ್ನು ಬೆಂಬಲಿಸಿದೆ. ಈಗಾಗಲೇ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಈಜಿಪ್ಟ್ ಮತ್ತು ಜೋರ್ಡಾನ್ ಈ ಒಪ್ಪಂದವನ್ನು ಸ್ವಾಭಾವಿಕವಾಗಿ ಬೆಂಬಲಿಸಿವೆ.

ಈ ನಡುವೆ ಮುಸ್ಲಿಂ ಜಗತ್ತು ಸ್ಪಷ್ಟವಾಗಿ ಎರಡು ಭಾಗವಾಗಿದೆ. ಪ್ಯಾಲೆಸ್ಟೇನ್ ಈ ಒಪ್ಪಂದವನ್ನು ತಿರಸ್ಕರಿಸಿದೆ ಮತ್ತು ಖಂಡಿಸಿದೆ. ಹಮಾಸ್ ಕೂಡ ಈ ಒಪ್ಪಂದವನ್ನು ತಿರಸ್ಕರಿಸಿದೆ. ಅಮೇರಿಕ ಹಾಗೂ ಇಸ್ರೇಲ್​ ವಿರೋಧಿ ದೇಶವಾಗಿರುವ ಇರಾನ್ ಇದನ್ನು ಮೂರ್ಖತನದ ಕಾರ್ಯತಂತ್ರ ಎಂದು ಬಣ್ಣಿಸಿದೆ. ಇನ್ನೊಂನು ಮುಸ್ಲಿಮ್ ದೇಶವಾದ ಟರ್ಕಿ ಈ ಒಪ್ಪಂದವನ್ನು ಕಪಟ ಎಂದು ಬಣ್ಣಿಸಿ, ಯುಎಇ ಜೊತೆಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಪುನರ್ ಪರಿಶೀಲಿಸುವ ಎಚ್ಚರಿಕೆ ನೀಡಿದೆ.

ಮಲೇಷ್ಯಾ ಈ ಒಪ್ಪಂದ ಬೆಂಕಿಗೆ ಹೆಚ್ಚಿನ ತೈಲ ಎರೆಯುವಂತಹ ಒಪ್ಪಂದವೆಂದು ಇದನ್ನು ಜರಿದಿದೆ. ಆದರೆ ಅದರ ನೆರೆಹೊರೆ ರಾಷ್ಟ್ರ ಇಂಡೋನೇಷ್ಯಾ ಇನ್ನೂ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಇನ್ನು ಅತ್ಯಂತ ಕುತೂಹಲಕಾರಿಯಾಗಿರುವುದು ಪಾಕಿಸ್ತಾನದ ಪ್ರತಿಕ್ರಿಯೆ, ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿರವ ಪಾಕ್, ತಾನು ಇನ್ನು ಈ ಒಪ್ಪಂದವನ್ನು ವಿಶ್ಲೇಷಿಸುತ್ತಿದೆ ಎಂದು ಹೇಳಿದೆ.

ಇನ್ನು, ಏಷ್ಯಾ ಖಂಡದ ಎರಡು ಪ್ರಮುಖ ದೇಶಗಳಾದ ಭಾರತ ಮತ್ತು ಚೀನಾ ಎರಡೂ ಒಪ್ಪಂದವನ್ನು ಸ್ವಾಗತಿಸಿವೆ. ಉಳಿದಂತೆ ಸಹಜವಾಗಿ ಎಲ್ಲ ಪ್ರಮುಖ ಪಾಶ್ಚಿಮಾತ್ಯ ದೇಶಗಳು ಈ ಒಪ್ಪಂದವನ್ನು ಸ್ವಾಗತಿಸಿವೆ.

ಈ ಒಪ್ಪಂದದಿಂದ ಯಾರಿಗೆ ಏನು ಲಾಭ?

ಮೊದಲಿಗೆ ನವಂಬರ್​​​ನಲ್ಲಿ ಚುನಾವಣೆ ಎದುರಿಸುತ್ತಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದ ಶ್ರೇಯದೊಂದಿಗೆ ಚುನಾವಣೆ ಎದುರಿಸಬಹುದು. ಮೊದಲಿಗೆ ಅಫ್ಘಾನ್ -ತಾಲಿಬಾನ್ ಈಗ ಇಸ್ರೇಲ್ ಯುಎಇ ಒಪ್ಪಂದದ ಶ್ರೇಯದೊಂದಿಗೆ ಅವರು ಚುನಾವಣೆ ಎದುರಿಸಬಹುದು. ಅಮೆರಿಕದ ಆರ್ಥಿಕತೆಯಲ್ಲಿ ದೊಡ್ಡ ಪ್ರಭಾವ ಹೊಂದಿರುವ ಇಸ್ರೇಲ್ ಮೂಲದವರು ಟ್ರಂಪ್ ಬೆಂಬಲಕ್ಕೆ ದೊಡ್ಡ ಮಟ್ಟದಲ್ಲಿ ನಿಲ್ಲಲಿದ್ದಾರೆ.

ಜೊತೆಗೆ ಉಭಯ ರಾಷ್ಟ್ರಗಳಿಗೆ ಇದು ನೋಬೆಲ್ ಪ್ರಶಸ್ತಿ ತಂದುಕೊಡಲುಬಹುದು. 1978ರಲ್ಲಿ ಕ್ಯಾಂಪ್ ಡೇವಿಡ್ ಅಕಾರ್ಡ್‌ನಂತೆ ಇತಿಹಾಸ ಪುನರಾವರ್ತಿಸಬಹುದು. ಇದರ ಜೊತೆಗೆ ದೊಡ್ಡ ಬಾಯಿಯ ಟ್ರಂಪ್ ಕೂಡ ಈ ಪ್ರಶಸ್ತಿಗೆ ಹಕ್ಕುದಾರನಾಗಬಹುದು.

ಈ ಒಪ್ಪಂದದ ಹಿನ್ನೆಲೆಯಲ್ಲಿ ಇಸ್ರೇಲ್ ಜೊತೆ ವ್ಯವಹರಿಸುವಾಗ ಯುಎಇ ಮತ್ತು ಅದರ ನೆರೆಹೊರೆಯವರ ತಲೆ ನೋವು ಕಡಿಮೆಯಾಗುತ್ತದೆ. ಇದರ ಜೊತೆಗೆ ಈ ಪ್ರದೇಶದಲ್ಲಿ "ಮಧ್ಯಮ ಶಕ್ತಿ"ಯಾಗಿ ಹೊರಹೊಮ್ಮುವ ಮತ್ತು ಸೌದಿ ಪ್ರಭಾವದಿಂದ ಮುಕ್ತವಾದ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸುವ ಎಮಿರೇಟಿ (ಯುಎಇಜನರ) ಬಯಕೆಗೆ ಇದು ಸರಿಹೊಂದುತ್ತದೆ. ಈಗಾಗಲೇ ಸ್ವತಂತ್ರ ವಿದೇಶಾಂಗ ನೀತಿ ಹೊಂದುವ ಅವರ ಬಯಕೆ ಯೆಮೆನ್​ನಿಂದ ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಶ್ರುತಪಟ್ಟಿದೆ.

ಸೌದಿ ತನ್ನ ಪಡೆಗಳನ್ನು ಯೆಮೆನ್​ನಿಂದ ಹಿಂತೆಗೆದುಕೊಳ್ಳದಿದ್ದರು, ಯುಎಇ ಅದಕ್ಕೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿದೆ. ಸೌದಿ ಅರೇಬಿಯಾ ಮತ್ತು ಓಮನ್ ನಿಧಾನವಾಗಿ ಆದರೂ ಸ್ಪಷ್ಟವಾಗಿ, ಇದೆ ನೀತಿ ಅನುಸರಿಸುವ ಸಾಧ್ಯತೆ ಇದೆ. ಅತ್ಯಂತ ಕ್ಷಿಪ್ರವಾಗಿ ನಶಿಸಿಹೋಗುತ್ತಿರುವ ತೈಲ ನಿಕ್ಷೇಪಗಳಿಗೆ (ಒಂದು ವೇಳೆ ಶುದ್ಧ ಪರ್ಯಾಯ ಇಂಧನ ವಾಹನಗಳು ಜನಪ್ರಿಯಗೊಂಡ ಬಳಿಕ ತೈಲ ನಿಕ್ಷೇಪಗಳು ವ್ಯರ್ಥ) ಪರ್ಯಾಯವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾದರೆ ತನ್ನ ವಿಶಾಲ ಭೂಪ್ರದೇಶವನ್ನು ಬಳಸಿಕೊಳ್ಳಬೇಕಾಗುತ್ತದೆ.

ಇತರ ಜಿಸಿಸಿ ದೇಶಗಳಿಗೆ ಹೋಲಿಸಿದರೆ ಒಮಾನ್ ನ ತೈಲ ಸಂಪತ್ತು ಶೂನ್ಯ. ಆದರೆ ಸೌದಿ ಅರೇಬಿಯಾದ ನಂತರ ಕೊಲ್ಲಿಯಲ್ಲಿ ಎರಡನೇ ಅತಿ ದೊಡ್ಡ ಪ್ರದೇಶವನ್ನು ಹೊಂದಿದೆ. ತನ್ನ ಭೂಮಿಯನ್ನು ಹೆಚ್ಚು ಉತ್ಪಾದಕವಾಗಿ ಬಳಸಿಕೊಳ್ಳಬೇಕಾದ ಒತ್ತಡದಲ್ಲಿ ಓಮನ್ ಇದೆ. ಇಸ್ರೇಲ್ ಬಂಜರು ಮರುಭೂಮಿ ಭೂ ಪ್ರದೇಶವನ್ನು ಕೃಷಿ ಸಮೃದ್ಧವಾಗಿ ಪರಿವರ್ತಿಸುವ ತಂತ್ರಜ್ಞಾನ ಇದೆ. ಹೀಗಾಗಿ ದೇಶ ಈ ರಾಷ್ಟ್ರಗಳಿಗೆ ಸಹಾಯ ಮಾಡಬಲ್ಲದು. ಗುಪ್ತಚರ ಜಾಲ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಇಸ್ರೇಲ್​ನ ಸಾಮರ್ಥ್ಯ ಎಲ್ಲರಿಗೂ ಮನವರಿಕೆಯಾಗಿದೆ. ಇದು ಇರಾನ್​ನ ಸಂಭಾವ್ಯ ದಾಳಿಯಿಂದ ಭವಿಷ್ಯದಲ್ಲಿ ತಪ್ಪಿಸಿಕೊಳ್ಳಲು ಗಲ್ಫ್ ರಾಷ್ಟ್ರಗಳಿಗೆ ಅತಿ ಅಗತ್ಯ. ಈ ಒಪ್ಪಂದದಿಂದ ನಿಸ್ಸಂಶಯವಾಗಿ ಸೋತಿರುವುದು ಪ್ಯಾಲೆಸ್ಟೈನ್. ಈ ಒಪ್ಪಂದದ ಕಾರಣಕ್ಕಾಗಿ ಹೊಸದಾಗಿ ಅದರ ಭೂಪ್ರದೇಶವನ್ನು ಇಸ್ರೇಲ್ ಆಕ್ರಮಿಸುವುದಿಲ್ಲ ಎಂದು ಅದು ತೃಪ್ತಿಪಡಬೇಕಿದೆ.

ಬಹುತೇಕ ಮಧ್ಯಪ್ರಾಚ್ಯ ರಾಷ್ಟ್ರಗಳು ಇಸ್ರೇಲ್ ಪರವಾದ ನಿಲುವಿಗೆ ಬದಲಾವಣೆ ಗೊಂಡಿರುವುದರಿಂದ ಇನ್ನು ಮುಂದೆ ಪ್ಯಾಲೆಸ್ಟೈನ್​​​ಗೆ ಹೆಚ್ಚು ದಾನಿ ದೇಶಗಳನ್ನು ಕಂಡು ಹುಡುಕುವುದು ಕಷ್ಟವಾಗಬಹುದು. ಟರ್ಕಿ ಕೂಡ ಬೆಂಬಲಿಗರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಇರಾನ್ ದೇಶ ಇರಾಕ್, ಮಧ್ಯಪ್ರಾಚ್ಯ, ಅಫ್ಘಾನ್ ಮತ್ತಿತರ ಶತ್ರುಗಳಿನಿಂದಲೇ ಸುತ್ತುವರಿದಿದ್ದು ಚಂಚಲ ಪಾಕಿಸ್ತಾನದ ಬೆಂಬಲ ಕೂಡ ನಿರೀಕ್ಷಿತವಲ್ಲ.

ಈ ಪರಿಸ್ಥಿಯಲ್ಲಿ ನಿಜಕ್ಕೂ ಅಡಕತ್ತರಿಯಲ್ಲಿ ಸಿಲುಕಿಕೊಂಡಿರುವುದು ಪಾಕಿಸ್ತಾನ. ಈಗ ದೇಶಕ್ಕಿರುವುದು ಕೇವಲ 2 ಕೆಟ್ಟ ಪರ್ಯಾಯಗಳು. ಸೌದಿ ಅರೇಬಿಯಾವು ಮುಸ್ಲಿಂ ಜಗತ್ತನ್ನು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಆಳುತ್ತಿದೆ. ಆದರೆ ತಾನು ಪರಮಾಣು ಶಕ್ತಿ ಹೊಂದಿರುವ ಏಕೈಕ ಮುಸ್ಲಿಂ ರಾ್ಷ್ಟ್ರ ಎಂಬ ಕಾರಣಕ್ಕಾಗಿ ಮುಸ್ಲಿಂ ದೇಶಗಳ ನಾಯಕತ್ವ ತನಗೆ ಬರಬೇಕು ಎಂಬ ಆಸೆ ಪಾಕಿಸ್ತಾನದ್ದು.

ಇಂತಹ ಸನ್ನಿವೇಶದಲ್ಲಿ ಈ ಒಪ್ಪಂದವನ್ನು ಬೆಂಬಲಿಸಿದರೆ ಅದು ತನ್ನ ಮಿತ್ರರಾಷ್ಟ್ರಗಳಾದ ಟರ್ಕಿ, ಮಲೇಷ್ಯಾ ಮತ್ತು ಇರಾನ್‌ಗಳಿಂದ ದೂರವಾಗಬೇಕಾಗುತ್ತದೆ ಮತ್ತು ಮುಸ್ಲಿಂ ಜಗತ್ತನ್ನು ಮುನ್ನಡೆಸುವ ಆಕಾಂಕ್ಷೆಯನ್ನು ಅದು ಕೈಬಿಡಬೇಕಾಗುತ್ತದೆ. ಮತ್ತೊಂದೆಡೆ ಪಾಕಿಸ್ತಾನವು ಈ ಒಪ್ಪಂದವನ್ನು ವಿರೋಧಿಸಿದರೆ ಯುಎಇ ಮತ್ತು ಸೌದಿ ಅರೇಬಿಯಾ ಜೊತೆಗಿನ ಅದರ ಸಂಬಂಧ ಇನ್ನಷ್ಟು ವಿಷಮ ಸ್ಥಿತಿಗೆ ತಲುಪುತ್ತದೆ. ಮಧ್ಯಪ್ರಾಚ್ಯ ದೇಶಗಳ ಜೊತೆಗಿನ ಪಾಕಿಸ್ತಾನದ ಸಂಬಂಧ ಅಷ್ಟು ಚೆನ್ನಾಗಿಲ್ಲ. ಈಗಾಗಲೇ ಈ ಎರಡು ದೇಶಗಳು ತೈಲ ಆಮದು ಸಾಲ ಮತ್ತು ಸಾಲ ಸೌಲಭ್ಯವನ್ನು ಪಾಕಿಸ್ತಾನಕ್ಕೆ ಸ್ಥಗಿತಗೊಳಿಸಿವೆ.

ಪಾಕಿಸ್ತಾನದ ಬಹುತೇಕ ಅನಿವಾಸಿಗಳು ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿದ್ದಾರೆ. ಅವರು ಮಾತೃ ದೇಶಕ್ಕೆ ಕಳುಹಿಸುವ ಹಣ ಪಾಕಿಸ್ತಾನದ ಖಾಲಿಯಾದ ವಿದೇಶಿ ವಿನಿಮಯ ಸಂಗ್ರಹವಕ್ಕೆ ಜೀವ ತುಂಬಿಸುತ್ತಿವೆ. ಒಂದೊಮ್ಮೆ ಇದು ನಿಂತರೆ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗುವ ಭಯವಿದೆ. (ಚೀನಾ ಈಗಾಗಲೇ ಈ ಒಪ್ಪಂದವನ್ನು ಸ್ವಾಗತಿಸಿದೆ). ಇನ್ನು ಚೀನಾಗೆ ಹೀಗೆ ದಿವಾಳಿಯಾಗುವ ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರಕ್ಕೆ ಹೆಚ್ಚಿನ ಸಾಲ ನೀಡಲು ಕಷ್ಟವಾಗಬಹುದು. ಏಕೆಂದರೆ ಇಂತಹ ಸಾಲ ನೀಡುವ ನಿರ್ಧಾರ ವಿವೇಕದಿಂದ ಕೂಡಿರುವುದಿಲ್ಲ.
ಇನ್ನು ಚೀನಾ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ಹೀಗಾಗಿ ಅದು ಈ ವಿಷಯದಲ್ಲಿ ಅತಿ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಗಲ್ಫ್ ಅಥವಾ ಇರಾನ್ ಎಂಬ ಆಯ್ಕೆ ಮಾಡಲೆಬೇಕಾದ ಸವಾಲು ಎದುರಾಗದಿದ್ದರೆ ಚೀನಾಗೆ ಏನು ಸಮಸ್ಯೆ ಎದುರಾಗಾಲಿಕ್ಕಿಲ್ಲ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇದೊಂದು ಉತ್ತಮ ಬೆಳವಣಿಗೆ. ಇನ್ನುಮುಂದೆ ಭಾರತ ಇಸ್ರೇಲ್ ಜೊತೆಗಿನ ಭಾಂದವ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಅರಬ್ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಡಿ ಇಡಬೇಕಾದ ಅಗತ್ಯ ಇಲ್ಲ. ಈ ಹಿಂದೆ ಪ್ರತಿ ಬಾರಿಯೂ ಅರಬ್ ರಾಷ್ಟ್ರಗಳನ್ನು ದೇಶದ ಇಸ್ರೇಲ್ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ಅತಿ ಕಷ್ಟಪಟ್ಟು ಮನವರಿಕೆ ಮಾಡಬೇಕಿತ್ತು.

ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆಗಿನ ಸುಮಧುರ ಸಂಬಂಧ ಹಾಗೂ ಇಸ್ರೇಲ್ ಜೊತೆಗಿನ ಒಪ್ಪಂದಗಳನ್ನು ಜೊತೆ ಜೊತೆಯಾಗಿಯೇ ನಾವು ಮುಂದಕ್ಕೆ ಕೊಂಡೊಯ್ಯಬಹುದು. ಇದರ ಜೊತೆಗೆ ಪ್ಯಾಲೆಸ್ಟೇನ್ ರಾಷ್ಟ್ರಕ್ಕೆ ನಮ್ಮ ನೈತಿಕ ಮತ್ತು ರಾಜಕೀಯ ಬೆಂಬಲವನ್ನು ಕೂಡ ಮುಂದುವರಿಸಬಹುದು.

ಇವೆನೇ ಇದ್ದರೂ ಇನ್ನು ಕೆಲವೇ ದಿನಗಳಲ್ಲಿ ನಮಗೆ ಹೊಸ ಸ್ಪಷ್ಟಚಿತ್ರಣ ದೊರಕಲಿದೆ. ಇದು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೊಸ ಭೌಗೋಳಿಕ-ರಾಜಕೀಯ ಸಮೀಕರಣಕ್ಕೆ ಕಾರಣವಾಗಲಿದೆ. ಇದರ ಪ್ರಭಾವ ಜಾಗತಿಕ ಮಟ್ಟದಲ್ಲೂ ಪ್ರತಿಫಲನಗೊಳ್ಳುವುದು ಖಚಿತ.

ABOUT THE AUTHOR

...view details