ರಿಯಾದ್: ಪಾಕಿಸ್ತಾನದೊಂದಿಗೆ ಸೌದಿ ಅಸಮಾಧಾನವನ್ನು ಸರಿಪಡಿಸಲು ರಿಯಾದ್‌ಗೆ ತೆರಳಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಸಭೆ ನಡೆಸಲು ವಿಫಲರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಉಭಯ ದೇಶಗಳ ನಡುವಿನ ಬಿರುಕುಗಳ ಹಿನ್ನೆಲೆ ಬಜ್ವಾ ಮತ್ತು ಐಎಸ್‌ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು.
ಕಮರ್ ಜಾವೇದ್ ಬಜ್ವಾ ಸೌದಿ ಅರೇಬಿಯಾದ ಉಪ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಮತ್ತು ಸೌದಿ ಅರೇಬಿಯಾದ ಮಿಲಿಟರಿ ಮುಖ್ಯಸ್ಥ ಜನರಲ್ ಫಯಾದ್ ಬಿನ್ ಹಮೀದ್ ಅಲ್ ರುವಾಯಿಲಿ ಅವರನ್ನು ಭೇಟಿಯಾದರೂ, ರಾಜಕುಮಾರನನ್ನು ಭೇಟಿಯಾಗಲು ವಿಫಲರಾದರು.
ಕಾಶ್ಮೀರ ವಿಷಯದ ಬಗ್ಗೆ ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ಸೌದಿ ಅರೇಬಿಯಾ ನಿರಾಕರಿಸಿದ ನಂತರ, ಪಾಕಿಸ್ತಾನದ ವಿದೇಶಾಂಗ ಸಚಿವ ಷಾಹ್ ಮೆಹಮೂದ್ ಖುರೇಷಿ ಸೌದಿ ಅರೇಬಿಯಾಕ್ಕೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಬಿರುಕು ಮೂಡಿದೆ.