ದುಬೈ:ಫೈಜರ್ ಹಾಗೂ ಬಯೋಎನ್ಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ 'ಫೈಜರ್' ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಸೌದಿ ಅರೇಬಿಯಾ ಅನುಮೋದನೆ ನೀಡುತ್ತಿದ್ದಂತೆಯೇ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ವಿತರಿಸಲು ಬಹ್ರೇನ್ ಸರ್ಕಾರ ಸಜ್ಜಾಗಿದೆ.
1.5 ಮಿಲಿಯನ್ (15 ಲಕ್ಷ) ಜನಸಂಖ್ಯೆ ಹೊಂದಿದ ಈ ದೇಶದಲ್ಲಿನ ಎಲ್ಲಾ ನಾಗರಿಕರು ಮತ್ತು ನಿವಾಸಿಗಳಿಗೆ ಸುರಕ್ಷಿತ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು. ದಿನಕ್ಕೆ 10,000 ಜನರಂತೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದು ಬಹ್ರೇನ್ ಹೇಳಿದೆ. ಆದರೆ ಲಸಿಕೆಯ ಹೆಸರನ್ನು ಉಲ್ಲೇಖಿಸಿಲ್ಲ.
ಇಂಗ್ಲೆಂಡ್ ಬಳಿಕ ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಪ್ರಪಂಚದ ಎರಡನೇ ದೇಶ ನಮ್ಮದಾಗಿದೆ ಎಂದು ವಾರದ ಹಿಂದೆ ಬಹ್ರೇನ್ ಸರ್ಕಾರ ಹೇಳಿಕೆ ನೀಡಿತ್ತು. ಅಲ್ಲದೇ ಚೀನಾ ಉತ್ಪಾದನೆ ಮಾಡಿರುವ 'ಸಿನೊಫಾರ್ಮ್' ಎಂಬ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಬಹ್ರೇನ್ ಈಗಾಗಲೇ ಸಮ್ಮತಿ ನೀಡಿದ್ದು, 6,000 ಜನರ ಮೇಲೆ ಪ್ರಯೋಗಿಸಿದೆ. ಸಿನೊಫಾರ್ಮ್ ಲಸಿಕೆಯು ಶೇ. 86ರಷ್ಟು ಪರಿಣಾಮಕಾರಿಯಾಗಿದೆ ಎಂದು ಯುನೈಟೆಡ್ ಅರಬ್ ಎಮಿರೈಟ್ಸ್ ಹೇಳಿದೆ.