ಜೆರುಸಲೆಮ್ :ಅಲ್ ಜಝೀರಾ ಸ್ಯಾಟಲೈಟ್ ಚಾನೆಲ್ಲಿನ ವರದಿಗಾರ್ತಿಯೊಬ್ಬಳನ್ನು ಇಸ್ರೇಲ್ ಬಾರ್ಡರ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೆರುಸಲೇಮ್ನಲ್ಲಿ ಪ್ಯಾಲೆಸ್ತೇನಿಯರು ನಡೆಸುತ್ತಿದ್ದ ಪ್ರತಿಭಟನಾ ಕಾರ್ಯಕ್ರಮವೊಂದನ್ನು ವರದಿ ಮಾಡುತ್ತಿದ್ದಾಗ ಈಕೆಯನ್ನು ಬಂಧಿಸಲಾಗಿದೆ.
ಶೇಖ್ ಜರ್ರಾ ಎಂಬ ಸ್ಥಳದಿಂದ ಬುದೇರಿ ಹೆಸರಿನ ಅಲ್ ಜಝೀರಾ ಪತ್ರಕರ್ತೆಯನ್ನು ಶನಿವಾರ ಬಂಧಿಸಲಾಗಿತ್ತು. ಇದಾಗಿ ಕೆಲ ಗಂಟೆಗಳ ನಂತರ ಆಕೆಯನ್ನು ಇಸ್ರೇಲ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ವರದಿ ಮಾಡುತ್ತಿದ್ದ ತನ್ನ ಕ್ಯಾಮೆರಾಮನ್ ಬಳಿಯ ಎಲ್ಲ ಸಲಕರಣೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಅಲ್ ಜಝೀರಾ ಹೇಳಿಕೊಂಡಿದೆ.
ಅಲ್ಲದೆ ಇಸ್ರೇಲ್ ಪೊಲೀಸರಿಂದ ಬಂಧಿತಳಾಗಿದ್ದ ಪತ್ರಕರ್ತೆ ಬುದೇರಿಯ ಕೈ ಮುರಿದಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಜೆರುಸಲೇಮ್ನಲ್ಲಿರುವ ಹದಾಸಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ ಜಝೀರಾ ಜೆರುಸಲೇಮ್ ಬ್ಯೂರೊ ಮುಖ್ಯಸ್ಥ ಖಾಲಿದ್ ಓಮರಿ ಹೇಳಿದ್ದಾರೆ.
ಬುದೇರಿ ನಿಯಮಿತವಾಗಿ ಶೇಖ್ ಜರ್ರಾದಿಂದ ವರದಿ ಮಾಡುತ್ತಿದ್ದರು. ಶನಿವಾರ ಪ್ಯಾಲೆಸ್ತೇನಿಯನ್‌ರು ನಡೆಸುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿರುವಾಗ ಅಲ್ಲಿದ್ದ ಇಸ್ರೇಲ್ ಪೊಲೀಸರು ಗುರುತಿನ ಪತ್ರ ತೋರಿಸುವಂತೆ ಕೇಳಿದ್ದಾರೆ.
ಕಾರಿನಲ್ಲಿದ್ದ ಗುರುತಿನ ಪತ್ರವನ್ನು ತರಲು ಕಾರು ಚಾಲಕ ತೆರಳಿದ್ದ. ಆದರೆ, ಆತ ಬರುವ ಮುನ್ನವೇ ಬುದೇರಿಯನ್ನು ಬಲವಂತವಾಗಿ ವಶಕ್ಕೆ ಪಡೆದ ಪೊಲೀಸರು ಆಕೆ ಕೈಗೆ ಕೋಳ ತೊಡಿಸಿ ಕರೆದುಕೊಂಡು ಹೋದರು.
ಬುದೇರಿ ಇಸ್ರೇಲ್ ಸರ್ಕಾರದ ಮಾಧ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿದ್ದರೂ ಇಸ್ರೇಲ್ ಪೊಲೀಸರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಓಮರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಇಸ್ರೇಲ್ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.