ವಾಷಿಂಗ್ಟನ್:ಅಮೆರಿಕ ತನ್ನ ಸೇನಾಪಡೆ ವಾಪಸ್ ಪಡೆದುಕೊಳ್ಳುತ್ತಿದ್ದಂತೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಇದೇ ವಿಚಾರವಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನಲ್ಲಿ ಅಮೆರಿಕ ಸೇನೆ ನಿಯೋಜನೆ ಮಾಡಿತ್ತು. ಆದರೆ ಇದೀಗ ದಿಢೀರ್ ಆಗಿ ಹಿಂಪಡೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ತಾಲಿಬಾನ್ ಉಗ್ರರು ಒಂದರ ಮೇಲೆ ಒಂದರಂತೆ ಎಲ್ಲ ನಗರ ವಶಕ್ಕೆ ಪಡೆದುಕೊಂಡಿದ್ದು, ಇದೀಗ ಕಾಬೂಲ್ಗೂ ಲಗ್ಗೆ ಹಾಕಿದ್ದಾರೆ. ಇದೇ ವಿಷಯನ್ನಿಟ್ಟುಕೊಂಡು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಜೋ ಬೈಡನ್ ಅಫ್ಘಾನಿಸ್ತಾನದಲ್ಲಿ ಯಾವುದಕ್ಕೆ ಅವಕಾಶ ನೀಡಿದ್ದಾರೋ ಅದಕ್ಕೆ ಅವಮಾನಿತರಾಗಿ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಇದರ ಜೊತೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ, ದೇಶೀಯ ವಲಸೆ ನೀತಿ, ಆರ್ಥಿಕ ಮತ್ತು ಇಂಧನ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅಫ್ಘಾನ್ನ ಯುಎಸ್ ರಾಯಭಾರಿ ಬಳಿ ಸ್ಫೋಟ
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಎರಡು ಸಲ ಸ್ಫೋಟ ನಡೆಸಲಾಗಿದೆ. ಕಾಬೂಲ್ನಲ್ಲಿರುವ ಕಚೇರಿ ಬಳಿ ಸ್ಫೋಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಅಲ್ಲಿನ ವಿಮಾನ ನಿಲ್ದಾಣದ ಬಳಿ ಕೂಡ ಗುಂಡಿನ ದಾಳಿ ನಡೆಸಿದ್ದಾರೆ.