ಸನಾ(ಯೆಮೆನ್): ಬಂಡುಕೋರರ ಹಾವಳಿಯನ್ನು ಹಂತಹಂತವಾಗಿ ಯೆಮೆನ್ನಲ್ಲಿ ನಿಯಂತ್ರಿಸಲಾಗುತ್ತಿದೆ. ಸುಮಾರು 108 ಹೌಥಿ ಬಂಡುಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಘೋಷಿಸಿದೆ.
ಹೌಥಿ ಬಂಡುಕೋರರ ವಿರುದ್ಧ ಸುಮಾರು 24 ಗಂಟೆಯಲ್ಲಿ 19 ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಯೆಮೆನ್ನ ಅಬ್ಡಿಯಾ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 108 ಮಂದಿ ಹೌಥಿ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆ ಅಲ್ ಎಖ್ಬರಿಯಾವನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೌಥಿ ಬಂಡುಕೋರರನ್ನು ಅಬ್ಡಿಯಾ ಜಿಲ್ಲೆಯೊಳಗೆ ಬರದಂತೆ ತಡೆಯಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಹೇಳಿಕೆ ನೀಡಿತ್ತು. ಇದಕ್ಕೂ ಮೊದಲು ಮಂಗಳವಾರ ಸುಮಾರು 43 ಕಾರ್ಯಾಚರಣೆಗಳನ್ನು ನಡೆಸಿ 134 ಹೌಥಿ ಬಂಡುಕೋರರನ್ನು ಹತ್ಯೆ ಮಾಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು.
ಯೆಮೆನ್ ಅಧ್ಯಕ್ಷ ಅಬ್ದ್ - ರಬ್ಬು ಮನ್ಸೂರ್ ಹಾದಿಗೆ ಬೆಂಬಲವಾಗಿ ಬಂದಿದ್ದ ಸೌದಿ ನೇತೃತ್ವದ ಮೈತ್ರಿಕೂಟ ಯೆಮೆನ್ ಯುದ್ಧದಲ್ಲಿ ಸುಮಾರು 6 ವರ್ಷ ಪೂರೈಸಿದೆ. ಯುದ್ಧ ಈಗಾಗಲೇ ಪೂರ್ಣಗೊಂಡಿದ್ದು, ಈಗಲೂ ಹೌಥಿ ಬಂಡುಕೋರರ ವಿರುದ್ಧ ದಾಳಿಗಳನ್ನು ನಡೆಸುತ್ತಿದೆ.
ಇದನ್ನೂ ಓದಿ:ಶಾರೂಖ್ ಪುತ್ರ ಆರ್ಯನ್ ಜೊತೆ ಫೋಟೋ ಕ್ಲಿಕ್ಕಿಸಿದ ಸೆಲ್ಫಿಮ್ಯಾನ್ ವಿರುದ್ಧ ಲುಕ್ಔಟ್ ನೋಟಿಸ್