ಕೀವ್: ರಷ್ಯಾ ದಾಳಿಯಿಂದ ಅಕ್ಷರಶಃ ನಲುಗಿ ಹೋಗಿರುವ ಉಕ್ರೇನ್ ಬ್ರಿಟನ್‌ನಿಂದ ಮತ್ತಷ್ಟು ನೆರವು ಕೋರಿದೆ. ಸಂಸತ್ತಿನ ಸದಸ್ಯರನ್ನು (ಹೌಸ್ ಆಫ್ ಕಾಮನ್ಸ್) ಉದ್ದೇಶಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾವನಾತ್ಮಕ ಭಾಷಣ ಮಾಡಿದ್ದು, ಬ್ರಿಟಿಷ್ ವಾರ್ ಲೀಡರ್ ಸರ್ ವಿನ್‌ಸ್ಟನ್ ಚರ್ಚಿಲ್ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಆಕಾಶ, ಸಮುದ್ರ ಹಾಗೂ ನೆಲದ ಮೂಲಕ ಆಕ್ರಮಣ ಮಾಡುತ್ತಿರುವ ರಷ್ಯಾ ಪಡೆಗಳ ವಿರುದ್ಧ ಹೋರಾಟದ ಪ್ರತಿಜ್ಞೆ ಮಾಡಿದ್ದಾರೆ.
ಯುದ್ಧದ ಸಮಯದಲ್ಲಿ ಅಂದಿನ ಬ್ರಿಟನ್ ಪ್ರಧಾನಿ ಮಾಡಿದ್ದ ಸ್ಪೂರ್ತಿದಾಯಕ ಹೇಳಿಕೆ ಪ್ರಸ್ತಾಪಿಸಿದ ಝೆಲನ್‌ಸ್ಕಿ, ನಾವು ಕೊನೆಯವರೆಗೂ ಸಮುದ್ರ, ಆಕಾಶದಲ್ಲಿ ಹೋರಾಡುತ್ತೇವೆ. ನಮ್ಮ ಭೂಮಿಗಾಗಿ ಎಷ್ಟೇ ಬೆಲೆ ತೆತ್ತಾದರೂ ಹೋರಾಟ ಮುಂದುವರಿಸುತ್ತೇವೆ. ಕಾಡಿನಲ್ಲಿ, ಹೊಲಗಳಲ್ಲಿ, ತೀರಗಳಲ್ಲಿ, ಬೀದಿಗಳಲ್ಲಿ ಹೋರಾಡುತ್ತೇವೆ ಎಂದಿದ್ದಾರೆ.
ಇರಬೇಕೆ ಅಥವಾ ಇರಬಾರದು ಎಂಬುದು ಈಗ ನಮಗೆ ಪ್ರಶ್ನೆಯಾಗಿದೆ. ಈ 13 ದಿನಗಳಲ್ಲಿ ಈ ಪ್ರಶ್ನೆಯನ್ನು ಕೇಳ ಬಹುದಿತ್ತು. ಆದರೆ ಈಗ ನಾನು ನಿಮಗೆ ಖಚಿತವಾದ ಉತ್ತರವನ್ನು ನೀಡಬಲ್ಲೆ. ಹೌದು ಖಂಡಿತವಾಗಿಯೂ ನಾವು ಇರಬೇಕು ಎಂದಿದ್ದಾರೆ.